ಜಿಲ್ಲೆ

ಅತಿವೃಷ್ಠಿ ಪ್ರವಾಹದಿಂದಾದ ಹಾನಿಗೆ ಪರಿಹಾರ

ಬಾಗಲಕೋಟೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾಗುವ ಅತಿವೃಷ್ಠಿ, ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ, ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹ ಉಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಪಾವತಿಸಲು ಸರ್ಕಾರ ಮಂಜೂತಿ ನೀಡಿ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

ಪ್ರವಾಹದಿಂದ ಹಾನಿಗೊಳಗಾದ ಮನೆಗಳನ್ನು ಪೂರ್ಣ ಹಾನಿಯಾದ ಮನೆಗಳ ಮರು ನಿರ್ಮಾಣ ಮತ್ತು ಭಾಗಶಃ ಹಾನಿಯಾದ ಮನೆಗಳ ದುರಸ್ಥಿ ಎಂದು ೨ ವರ್ಗಗಳಲ್ಲಿ ವಿಂಗಡಿಸಿ ಪರಿಹಾರ ಪಾವತಿಸಲಾಗುತ್ತಿದೆ. ಪೂರ್ಣ ಹಾನಿಯಾದ ಮನೆಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ, ರಾಜ್ಯ ವಿಪತ್ತು ಪರಿಹಾರ ನಿಽ ಮಾರ್ಗಸೂಚಿಯನ್ವಯ ೧.೨೦ ಲಕ್ಷ ರೂ.ಗಳ ಪರಿಹಾರದ ಜೊತೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ ಅರಸು ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಲಾಗುತ್ತದೆ.

ದೇವರಾಜ ಅರಸು ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾನ್ಯ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ೧.೨೦ ಲಕ್ಷ ಮತ್ತು ಎಸ್‌ಸಿ, ಎಸ್‌ಟಿ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ೧.೫೦ ಲಕ್ಷ ರೂ. ಅನುಮೋದನೆಗೊಂಡ ಫಲಾನುಭವಿಗಳ ಪಟ್ಟಿಯನ್ನು ಆರ್.ಜಿ.ಆರ್.ಎಚ್.ಸಿ.ಎಲ್ ಪರಿಹಾರ ತಂತ್ರಾಂಶದಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ವಿವರಗಳನ್ನು ದಾಖಲಿಸಲಾಗುತ್ತಿದೆ. ಅನಧಿಕೃತ ಜಮೀನಿನಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಒಂದು ಬಾರಿ ಪರಿಹಾರವಾಗಿ ೧ ಲಕ್ಷ ಪಾವತಿಸಲಾಗುತ್ತಿದೆ. ಆದರೆ ಮನೆ ಮಂಜೂರಾತಿ ಮಾಡಲಾಗುವುದಿಲ್ಲ.

ಭಾಗಶಃ ಮನೆ ಹಾನಿಯಲ್ಲಿ ಶೇ.೧೫ ರಿಂದ ೨೦ ವರೆಗೆ ಸಣ್ಣ ಪುಟ್ಟ ಹಾನಿಗೆ ೬೫೦೦ ರೂ., ಶೇ.೨೦ ಕ್ಕಿಂತ ಹೆಚ್ಚು ಶೇ.೫೦ಕ್ಕಿಂತ ಕಡಿಮೆ ಇರುವ ಹಾನಿಗೆ ೩೦ ಸಾವಿರ ರೂ, ಶೇ.೫೦ ಕ್ಕಿಂತ ಹೆಚ್ಚು ಶೇ.೭೫ಕ್ಕಿಂತ ಕಡಿಮೆ ಇರುವ ಹಾನಿಗೆ ೫೦ ಸಾವಿರ ರೂ.ಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.