ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಪ್ರವೀಣಕುಮಾರ ಸಾಲಿ, ಡಾ. ಗಿರೀಶ ಪಾಟೀಲ ಇತರರು ಇದ್ದರು. 
ಜಿಲ್ಲೆ

ಅತಿವೃಷ್ಟಿ ಹಾನಿಯ ಸಮರ್ಪಕ ಮಾಹಿತಿ ನೀಡಿ

ರಾಮದುರ್ಗ, ಬೆಳಗಾವಿ: ಅತಿವೃಷ್ಟಿಯಿಂದ ಸಂಭವಿಸಿದ ಹಾನಿ ಕುರಿತು ಮಿನಿ ವಿಧಾನ ಸೌಧದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಶನಿವಾರ ಸಭೆ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಅತಿವೃಷ್ಟಿಯಿಂದ ಆದ ಹಾನಿ ಬಗ್ಗೆ ಸರಿಯಾದ ಮಾಹಿತಿ ಕಲೆಹಾಕದ ಕೆಲ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೊಂದ ಫಲಾನುಭವಿಗಳ ಸಮಸ್ಯೆಗೆ ಸ್ಪಂದಿಸದಿದ್ದರೆ ಮನೆಗೆ ನಡೆಯಿರಿ. ಕೆಲಸದಲ್ಲಿ ಏಕೆ ಮುಂದುವರಿಯುತ್ತೀರಿ ಎಂದು ಗರಂ ಆದರು.

ಸರ್ಕಾರಕ್ಕೆ ಮತ್ತು ರೈತರಿಗೆ ಅನ್ಯಾಯ ಮಾಡದಂತೆ ಸ್ಥಳದಲ್ಲಿರುವ ಕೆಲವು ನ್ಯೂನತೆಗಳನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪರಿಹರಿಸಬೇಕು. ಹಸುಗಳ ಚರ್ಮಗಂಟು ರೋಗ ನಿವಾರಣೆಗೆ ಪಶುವೈದ್ಯರು ಪ್ರತಿ ಹಳ್ಳಿ ಹಳ್ಳಿಗೂ ಪ್ರಯಾಣಿಸಬೇಕು ಎಂದು ಸೂಚನೆ ನೀಡಿದರು.

ಪಶು ಇಲಾಖೆಯ ಡಾ. ಗಿರೀಶ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಸಿಬ್ಬಂದಿ ಕೊರತೆ ಇದ್ದು, ಎಲ್ಲ ಕಡೆಗೆ ಭೇಟಿ ನೀಡಲು ಆಗುತ್ತಿಲ್ಲ. ಅವಶ್ಯ ಸಿಬ್ಬಂದಿ ಪೂರೈಸಬೇಕೆಂದು ಮನವಿ ಮಾಡಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಜೂನ್ ತಿಂಗಳಿಂದ ಅಕ್ಟೋಬರ್ ವರೆಗೆ 400ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ ಎಂದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ, ತೋಟಗಾರಿಕೆ ಇಲಾಖೆಯ ನಿರ್ದೇಶಕಿ ಸಂಗೀತಾ ಕುರೇರ್ ಇತರರು ಇದ್ದರು.