ಅತಿಯಾದ ಯೂರಿಯಾ ಬಳಕೆ ಪರಿಸರಕ್ಕೆ ಮಾರಕ
ಬೆಳಗಾವಿ: ಬೆಳೆಗಳಿಗೆ ಅತಿರೇಕವಾದ ಯೂರಿಯಾ ಬಳಕೆಯಿಂದ ಮಣ್ಣಿನ ಆರೋಗ್ಯ, ಬೆಳೆ ಇಳುವರಿ ಮತ್ತು ಪರಿಸರದ ಮೇಲೆ ವಿವಿಧ ಹಾನಿಕಾರಕ ಪರಿಣಾಮ ಉಂಟಾಗುತ್ತವೆ ಎಂದು ಜಂಟಿ ಕೃಷಿ ನಿರ್ದೇಶಕ ಎಚ್.ಡಿ ಕೊಳೆಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು
ಯೂರಿಯಾ ಹೆಚ್ಚು ಪ್ರಮಾಣದಲ್ಲಿ ಬಳಸಿದರೆ ಮಣ್ಣಿನ ಆಮ್ಲಿಯತೆ, ನೀರಿನ ಮಾಲಿನ್ಯ ಮತ್ತು ಹಸಿರು ಮನೆಗಳ ಅನಿಲ ಪ್ರಮಾಣ ಹೆಚ್ಚಳವಾಗಬಹುದು. ಇಳುವರಿ ಕಡಿಮೆಯಾಗಬಹುದು, ಪೋಷಕಾಂಶಗಳ ಅಸಮತೋಲನ ಉಂಟಾಗಬಹುದು, ಹಾಗೂ ಹೆಚ್ಚಿನ ಸಾರಜನಕ ಪ್ರಮಾಣದಿಂದ ಸಸ್ಯಗಳಿಗೆ ವಿಷಕಾರಿಯಾದ ಪರಿಣಾಮವಾಗಬಹುದು. ಬೆಳೆಗಳು ಹೆಚ್ಚು ಕೀಟ,ರೋಗಕ್ಕೆ ತುತ್ತಾಗುತ್ತವೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ.ಮಾನವನ ಆರೋಗ್ಯದ ಮೇಲೆ ಬೀರುತ್ತದೆ.
ಯೂರಿಯಾ ಹೆಚ್ಚಾಗಿ ಬಳಸಿದಾಗ, ಬೆಳೆದ ತರಕಾರಿ, ಹಣ್ಣುಗಳು, ಧಾನ್ಯಗಳಲ್ಲಿ ನೈಟ್ರೇಟ್ ಹಾಗೂ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇವು ದೀರ್ಘಾವಧಿಯಲ್ಲಿ ಸೇವಿಸಿದರೆ ಮಾನವನಿಗೆ ವಿಷಕಾರಿಯಾಗಿ ಹಲವು ರೋಗಗಳಿಗೆ ಕಾರಣವಾಗುತ್ತದೆ.ಇದರ ಜತೆಗೆ ಮಣ್ಣಿನ ಫಲವತ್ತತೆಗೆ ಪಟ್ಟು ಬೀಳುತ್ತದೆ.ಪರಿಸರದ ಮೇಲೆ ಪರಿಣಾಮ ಬೀರುತ್ತದೆ.ಆದ್ದರಿಂದ
ಸಮತೋಲನದ ರಸಗೊಬ್ಬರ ಬಳಕೆ ಮಾಡಬೇಕು,
ಹಾಗೂ ನ್ಯಾನೋ ಯೂರಿಯಾ ಬಳಕೆ ಉತ್ತಮವಾಗಿದೆ.
ನ್ಯಾನೋ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದೆ.ಇದು ಸಾಂಪ್ರದಾಯಿಕ ಯೂರಿಯಾ ಗೊಬ್ಬರಕ್ಕಿಂತ ಎಂಟರಿಂದ ಹತ್ತು ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶ ನೀಡುತ್ತದೆ. ನ್ಯಾನೋ ಯೂರಿಯಾ ಬಳಸಿದರೆ, ಸಾಂಪ್ರದಾಯಿಕ ಗ್ರಾನುಲರ್ ಯೂರಿಯಾ ಬಳಕೆ ಶೇಕಡಾ 50 ರಷ್ಟು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.