ಕಲಬುರಗಿ: ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಬೇಕು, ನೇಮಕ ಮಾಡಿದವರಿಗೆ ಆದೇಶ ಪ್ರತಿಗಳನ್ನು ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅತಿಥಿ ಶಿಕ್ಷಕರು, ಉಪನ್ಯಾಸಕರು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಕಚೇರಿಯಲ್ಲಿ ಸೋಮವಾರ ಮನವಿ ಸಲ್ಲಿಸಿದ ಅವರು, ಕಡಿಮೆ ವೇತನ ನೀಡುತ್ತಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ. ವೇತನ ಹೆಚ್ಚಿಸಬೇಕು, ಉದ್ಯೋಗ ಭದ್ರತೆ ಒದಗಿಸಬೇಕು, ವೇತನ ತಾರತಮ್ಯ ನೀಗಿಸಬೇಕು. ವರ್ಷಕ್ಕೆ ಐದರಂತೆ ಆರು ವರ್ಷದವರೆಗೆ ಕೃಪಾಂಕ ನೀಡಬೇಕು ಎಂದು ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಡಿ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕರಿಗೆ ೧೬,೫೦೦, ಉಪನ್ಯಾಸಕರಿಗೆ ೧೮,೧೫೦ ನೀಡುತ್ತಿದ್ದು, ಅದನ್ನೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅತಿಥಿ ಶಿಕ್ಷಕರಿಗೂ ನೀಡಬೇಕು ಎಂದು ಮನವಿ ಮಾಡಿದರು. ಬೇಡಿಕೆ ಇಡೇರಿಸದಿದ್ದರೆ ತರಗತಿ ಬಹಿಷ್ಕರಿಸಿ ಬೆಂಗಳೂರಿನ ಸ್ವಾತಂತ್ರÈ ಉದ್ಯಾನದಲ್ಲಿ ಸತ್ಯಾಗ್ರಹ ಮಾಡಲಾಗುವುದು ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಎಸ್.ಪೂಜಾರಿ, ಅಶ್ವಿನಿ, ಶಾಭನಾ ಬೇಗಂ, ಸುರೇಶಕುಮಾರ, ಸುರೇಖಾ ಪಿ, ತೇಜಸ್ವಿನಿ, ಪ್ರದೀಪಕುಮಾರ, ಅಂಬಿಕಾ ಮರತೂರ, ವಿಜಯಲಕ್ಷ್ಮೀ, ಸುವರ್ಣಾ ಪವಾರ್, ಮಹಾದೇವಪ್ಪ, ಸನಾ ಫಿರ್ಜೋಜ್, ಫರ್ವಿನ್ ಬೇಗಂ, ಮಹಮ್ಮದಿ ಇನಾಂದಾರ ಇತರರಿದ್ದರು.