ಜಿಲ್ಲೆ

ಅತಿಥಿ ಉಪನ್ಯಾಸಕರಿಂದ ಮುಂದುವರಿದ ಹೋರಾಟ

ಮೈಸೂರು : ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ರಾಜ್ಯ ಮಟ್ಟದ ಧರಣಿ 6ನೇ ದಿನ ಪೂರೈಸಿದೆ.

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ವತಿಯಿಂದ ಸೆ.12ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಶುಕ್ರವಾರ ಅಂಬೇಡ್ಕರ್, ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಪರ ಜಿಲ್ಲಾಧಿಕಾರಿ ಶಿವರಾಜು ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಬಿಕ್ಕಟ್ಟನ್ನು ಸರ್ಕಾರದ ಹಂತದಲ್ಲಿ ಅಥವಾ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು.

ಹತ್ತಾರು ವರ್ಷಗಳಿಂದ ನಿರಂತರ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದ ಅತಿಥಿ ಉಪನ್ಯಾಸಕರನ್ನು ಸೇವಾ ಹಿರಿತನದ ಆಧಾರದಲ್ಲಿ ಪರಿಗಣಿಸಬೇಕು. ನೇಮಕಾತಿಯಲ್ಲಿ ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ತಾರತಮ್ಯ ಮಾಡದೆ ಮಾನವೀಯ ದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ 18 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 5,623 ಅತಿಥಿ ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದವರು. ಈ ಅರ್ಹತೆ ವ್ಯಾಪ್ತಿಯಿಂದ ಹೊರಗೆ ಇರುವ ನಾನ್ ಯುಜಿಸಿಗಳ ಸಂಖ್ಯೆ 5,353 ಅತಿಥಿ ಉಪನ್ಯಾಸಕರಾಗಿದ್ದಾರೆ.

ಸಾವಿರಾರು ಅತಿಥಿ ಉಪನ್ಯಾಸಕರು ಎಂ.ಫಿಲ್ ಪದವಿ ಪಡೆದಿದ್ದಾರೆ. ಇವರೆಲ್ಲರೂ ಹತ್ತಾರೂ ವರ್ಷಗಳ ಕಾಲ ಬೋಧನಾ ಅನುಭವ, ಬೋಧನಾ ಕೌಶಲ ಹೊಂದಿದ್ದು. ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಯುಜಿಸಿ ಅರ್ಹತೆ ಪಡೆದಿಲ್ಲ ಎಂಬ ಕಾರಣದಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.

ಸಂಘದ ಮುಖಂಡರಾದ ಡಾ.ಸೋಮಶೇಖರ್ ಎಚ್.ಶಿಮೊಗ್ಗಿ, ಡಾ.ದಿವಾಕರ್, ಡಾ.ಜೆ.ಸಿ.ರವೀಂದ್ರ, ನಾಗರಾಜ್ ಮದ್ದೂರು, ರಾಜೇಶ್‌ಕುಮಾರ್, ಯತೀಶ್ ಕಬ್ಬಾಳ, ಹರ್ಷಿತಾ ಇನ್ನಿತರರಿದ್ದರು.