ಹಾಸನ: ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ನೂರಾರು ಉಪನ್ಯಾಸಕರು ಶುಕ್ರವಾರ ಸಂಜೆ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆಯ ಮುಂಭಾಗದಿಂದ ಹೊರಟ ಪ್ರತಿಭಟನೆಕಾರರು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ,ಮತ್ತೆ ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ,ಹಾಸನಂಬ ದೇವಾಲಯದಲ್ಲಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗಿದೆ.
ಅತಿಥಿ ಉಪನ್ಯಾಸಕರ ಮುಖ್ಯ ಬೇಡಿಕೆಯಾದ ಕಾಯಂಗೆ ಆಗ್ರಹಿಸಿ ನಡೆಸಲಾಗುತ್ತಿರುವ ಪ್ರತಿಭಟನಾ ಧರಣಿಯು 5ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಳೆದ 15-20 ವರ್ಷಗಳಿಂದ ಯಾವುದೇ ಸೌಲಭ್ಯಗಳಿಲ್ಲದೆ, ಕಾಯಮಾತಿ ಇಲ್ಲದೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮಗೆ ಬದುಕು ನಡೆಸುವುದು ದುಸ್ತರವಾಗಿದೆ. ನಾವುಗಳು ಕಾಯಮಾತಿಗೆ ಹಲವಾರು ವರ್ಷಗಳ ಹೋರಾಟ ಮಾಡಿದರೂ ಯಾವುದೇ ಶಾಶ್ವತ ಪರಿಹಾರ ನೀಡದೆ, ಕೇವಲ ತಾತ್ಕಾಲಿಕ ಪರಿಹಾರವನ್ನು ನೀಡುವ ಮೂಲಕ ನಮ್ಮ ಬದುಕುಗಳನ್ನು ಹಿಂದಿನ ಎಲ್ಲಾ ಸರ್ಕಾರಗಳು ಕಸಿದುಕೊಳ್ಳುತ್ತಾ ಬಂದಿವೆ ಎಂದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಸುನೀತಾ, ಸುರೇಶ್, ಮಹಮ್ಮದ್ ಆರೀಫ್ ಕಾರ್ಲೇ, ಅರಸೀಹಳ್ಳಿ ಮಂಜುನಾಥ್, ಧರಣೇಂದ್ರ, ಚೇತನ್, ಕುಮಾರ್, ಮಂಜೇಗೌಡ ಇತರರು ಉಪಸ್ಥಿತರಿದ್ದರು.