ಹಾಸನ: ರಾಜ್ಯದ ಪದವಿ ಕಾಲೇಜುಗಳಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ, ವೇತನ ಹೆಚ್ಚಳ ಮತ್ತು ಸೇವೆ ಖಾಯಂಗಾಗಿ ಒತ್ತಾಯಿಸಿ ಎಸ್‌ಎಫ್‌ಐ, ಡಿವೈಎಫ್‌ಐ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ಗಂಧದಕೋಠಿ ಕಾಲೇಜು ಆವರಣದಿಂದ ಆರ್.ಸಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿದ್ದು, ಸರ್ಕಾರಗಳ ನಿರ್ಲಕ್ಷೃದಿಂದಾಗಿ ಅವರ ಬದುಕು ಅತಂತ್ರಕ್ಕೆ ಸಿಲುಕಿದೆ. ಹಲವು ದಿನಗಳಿಂದ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಹೋರಾಟ ನಡೆಸುತ್ತಿದ್ದು, ಹಿಂದಿನ ಎಲ್ಲಾ ಸರ್ಕಾರಗಳಿಗೂ ಹಲವು ಬಾರಿ ಹಕ್ಕೊತ್ತಾಯಗಳನ್ನು ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಅತಿಥಿ ಉಪನ್ಯಾಸಕರ ಅಹವಾಲುಗಳಿಗೆ ಇದುವರೆಗೂ ಮನ್ನಣೆ ನೀಡದೇ ಇರುವುದು ಶಿಕ್ಷಣ ಮತ್ತು ವಿದ್ಯಾರ್ಥಿ ವಿರೋಧಿ ನಿಲುವನ್ನು ತೋರಿಸುತ್ತದೆ. ಇದರಿಂದಾಗಿ ವಿದ್ಯಾರ್ಥಿಳ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ದುಷ್ಪಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಅತಿಥಿ ಉಪನ್ಯಾಸಕರ ಉದ್ಯೋಗ ಭದ್ರತೆ, ವೇತನ ಹೆಚ್ಚಳ ಮತ್ತು ಸೇವೆ ಖಾಯಮಾತಿ ಸೇರಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ಅವರ ಬದುಕುಗಳನ್ನು ಉಳಿಸಬೇಕೆಂದು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಸಬೆಕೆಂದು ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಜಿಲ್ಲಾಧ್ಯಕ್ಷ ವಾಸುದೇವ್, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶ, ರಮೇಶ್ ಮುಖಂಡರಾದ ಶಶಿ ತಟ್ಟೆಕೆರೆ, ವಿವೇಕ್, ಸ್ವರೂಪ್ ಮತ್ತಿತರರು ಹಾಜರಿದ್ದರು.