ಜಿಲ್ಲೆ

ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಚೆಲ್ಲಾಟ : ಸರ್ಕಾರದ ವಿರುದ್ಧ ಎಚ್‌ಡಿಕೆ ಆರೋಪ

ಚನ್ನಪಟ್ಟಣ: ಸಮಸ್ಯೆಗಳನ್ನು ಬಗೆಹರಿಸಬೇಕಾದ ಸರ್ಕಾರ, ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಕೆಲಗೆರೆ ಗ್ರಾಮದಲ್ಲಿ ಶುಕ್ರವಾರ ಪಟ್ಟಲದಮ್ಮ ದೇವಾಲಯ ಉದ್ಘಾಟನೆ ಸವಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಉಪನ್ಯಾಸಕರ ಬಗ್ಗೆ ಸರ್ಕಾರದ ನಿಲುವು ಸರಿಯಿಲ್ಲ. ಅವರ ಸಮಸ್ಯೆ ಬಗೆಹರಿಸಲು ಸೂಕ್ತ ನಿರ್ಧಾರಗಳನ್ನು ಕೈಗೊಂಡಿಲ್ಲ. ಕೂಡಲೇ ಸರ್ಕಾರ ಈ ವಿಚಾರದಲ್ಲಿ ಆಗಿರುವ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಬೀದಿ ಪಾಲಾಗುತ್ತಿದೆ ಉಪನ್ಯಾಸಕರ ಬದುಕು: ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಿದ್ದೇವೆ, ಅವರಿಗೆ ಸಂಕ್ರಾಂತಿ ಉಡುಗೊರೆ ನೀಡಿದ್ದೇವೆ ಎಂದು ಸರ್ಕಾರದ ವತಿಯಿಂದ ಜಾಹೀರಾತು ನೀಡಿ ಪ್ರಚಾರ ಪಡೆಯಲಾಗಿದೆ. 32 ಸಾವಿರ ರೂ.ಗೆ ಸಂಬಳ ಹೆಚ್ಚಿಸಿದ್ದೇವೆ ಎನ್ನುತ್ತಾರೆ ಆದರೆ, 9 ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಸರ್ಕಾರದ ತೀರ್ವಾನದಿಂದ ಕೆಲಸ ಕಳೆದುಕೊಂಡಿದ್ದಾರೆ. ಇದರಿಂದ ಅವರ ಹಾಗೂ ಅವರ ಕುಟುಂಬದ ಬದುಕು ಬೀದಿಗೆ ಬಂದಿದೆ. 10ರಿಂದ 15 ವರ್ಷ ಈ ವೃತ್ತಿಯನ್ನೇ ನಂಬಿರುವವರು ಬೀದಿಪಾಲಾಗುತ್ತಿದ್ದಾರೆ. ಶಿಕ್ಷಣ ಸಚಿವರುಮಾತ್ರ ಐತಿಹಾಸಿಕ ನಿರ್ಣಯ ಮಾಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಕೂಡಲೇ ಸರ್ಕಾರ ತನ್ನ ಅವೈಜ್ಞಾನಿಕ ನಿರ್ಧಾರ ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯಿಂದ ಸಮಾಜ ಒಡೆಯುವ ಕೆಲಸ: ಹಿಜಾಬ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಸರ್ಕಾರಗಳು ಅಭಿವೃದ್ಧಿ ಮೂಲಕ ಜನರ ಮನಸ್ಸು ಗೆಲ್ಲಬೇಕು. ಇತ್ತೀಚೆಗೆ ಹಿಜಾಬ್ ವಿಚಾರ ಹುಟ್ಟಿಕೊಂಡಿದ್ದಾದರೂ ಏಕೆ ಗೊತ್ತಾಗುತ್ತಿಲ್ಲ. ಬಿಜೆಪಿ ಸರ್ಕಾರ ಅಭಿವೃದ್ಧಿಗಿಂತ ಧಾರ್ಮಿಕ ವಿಚಾರಗಳ ಮೂಲಕ ಸವಾಜ ಒಡೆದು ಮತ ಪಡೆಯಲು ಹವಣಿಸಿದೆ. ಬದಲಾಗಿ ಅಭಿವೃದ್ಧಿ ಮಾಡಿ, ಜನರ ಸಮಸ್ಯೆ ಬಗೆಹರಿಸಿ ವಿಶ್ವಾಸಗಳಿಸಲಿ. ಉತ್ತರ ಪ್ರದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿದರು. ಆದರೆ, ಈಗ ಚುನಾವಣೆ ಗೆಲ್ಲಲು ಸಾಕಷ್ಟು ಶ್ರಮಪಡುತ್ತಿದ್ದಾರೆ. ರಾಜ್ಯದಲ್ಲೂ ಧಾರ್ಮಿಕ ಹೆಸರಿನಲ್ಲಿ ರಾಜಕಾರಣ ಮಾಡಿದರೆ, ಉತ್ತರ ಪ್ರದೇಶದ ಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.