ಚಿತ್ರದುರ್ಗ: ನೇಮಕಾತಿ ಗೊಂದಲ ಪರಿಹರಿಸಿ ಸರ್ಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕ್ರಮ ವಹಿಸುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬೀಳೂರು ಮಾತನಾಡಿ, ರಾಜ್ಯಾದ್ಯಂತ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳಾದರೂ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲ ಎಂದರು.
ಎಲ್ಲ ಸರ್ಕಾರಿ ಪದವಿ ಕಾಲೇಜುಗಳು, ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು, ಇಲ್ಲಿಯವರೆಗೂ ತರಗತಿಗಳು ಸರಿಯಾಗಿ ನಡೆಯದೆ ಇರುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ಆತಂಕದಲ್ಲಿದ್ದಾರೆ ಎಂದು ತಿಳಿಸಿದರು.
ಆದ್ದರಿಂದ ಸರ್ಕಾರ ಈ ಕೂಡಲೇ ನೇಮಕಾತಿ ಗೊಂದಲ ಬಗೆಹರಿಸಿ ಅತಿಥಿ ಉಪನ್ಯಾಸಕರ ನೇಮಕ ಮಾಡಬೇಕೆಂದು ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಸಂಚಾಲಕ ಕೆ.ಈರಣ್ಣ, ಗಜೇಂದ್ರ, ಮೌನೇಶ್, ಸ್ವಪ್ನಾ, ಸಾನಿಯಾ, ಭಾರ್ಗವಿ, ದ್ಯಾನೇಶ್ ಇತರರಿದ್ದರು.