ಚಿಕ್ಕಮಗಳೂರು ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಅವರಿಗೆ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು ರಾಮನಹಳ್ಳಿ ಬಡಾವಣೆಯಲ್ಲಿ ಉದ್ಯಾನವನ ಜಾಗವನ್ನು ಅತಿಕ್ರಮಿಸಿರುವುದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಅಗ್ನಿ ಸುಮಂತ್, ಭಾರ್ಗವ್, ಶಂಕರ್ ಶೆಟ್ಟಿ, ಗೌತಮ್, ತೇಜಸ್, ಪ್ರದೀಪ್, ನಂದನ್, ಕಿರಣ್ ಮತ್ತಿತರರಿದ್ದರು. 
ಜಿಲ್ಲೆ

ಅತಿಕ್ರಮಿಸಿರುವ ಉದ್ಯಾನವನ ಜಾಗ ತೆರವಿಗೆ ಕರವೇ ಮನವಿ

ಚಿಕ್ಕಮಗಳೂರು: ನಗರದ ರಾಮನಹಳ್ಳಿ ಬಡಾವಣೆಯಲ್ಲಿ ಉದ್ಯಾನವನ ಜಾಗವನ್ನು ಅತಿಕ್ರಮಿಸಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಬಡಾವಣೆ ನಿವಾಸಿಗಳು ಕರವೇ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್, ಬಡಾವಣೆಯಲ್ಲಿ ೧೬೦೦ ಅಡಿ ಉದ್ಯಾನವನಕ್ಕಾಗಿ ಈ ಹಿಂದೆಯೇ ಜಾಗವನ್ನು ಕಾಯ್ದಿರಿಸಿ ನಕ್ಷೆ ಅನುಮೋದನೆಯಾಗಿತ್ತು. ಆದರೆ ಕೆಲವು ಬಲಾಡ್ಯ ವ್ಯಕ್ತಿಗಳು ಪಾರ್ಕ್ ಜಾಗವನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಉದ್ಯಾನವನ ಜಾಗವನ್ನು ನಿವೇಶನಗಳನ್ನಾಗಿ ಮಾಡಿಕೊಂಡು ರಾಮನಹಳ್ಳಿ ನಾಗರಿಕರಿಗೆ ಮೋಸ ಮಾಡಿ ಅಧಿಕ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಆದ್ದರಿಂದ ನಗರಸಭೆ ಆಡಳಿತವು ಪಾರ್ಕ್ ಅತಿಕ್ರಮದಾರರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಿ ಜಾಗವನ್ನು ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರ್ಗವ್, ಉಪಾಧ್ಯಕ್ಷ ಶಂಕರ್‌ಶೆಟ್ಟಿ, ನಿವಾಸಿಗಳಾದ ಗೌತಮ್, ತೇಜಸ್, ಪ್ರದೀಪ್, ನಂದನ್, ಕಿರಣ್ ಮತ್ತಿತರರಿದ್ದರು.