ಹಳಿಯಾಳ: ತಾಲೂಕಿನಲ್ಲಿ ಜಿಪಿಎಸ್ ಆಗದ 178 ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ (ಕೆಂಪುಸೇನೆ) ಪದಾಧಿಕಾರಿಗಳು ಪಟ್ಟಣದ ಡಿಎಫ್ಒ ಕಚೇರಿ ಎದುರು ಸೋಮವಾರ ದಿನವಿಡಿ ಧರಣಿ ನಡೆಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ರಾಮಚಂದ್ರ ವಡ್ಡರ ಮಾತನಾಡಿ, ತಾಲೂಕಿನಲ್ಲಿ 50-60 ವರ್ಷಗಳಿಂದ ಜಮೀನುರಹಿತರು ಅರಣ್ಯ ಅತಿಕ್ರಮಣ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಅವರಲ್ಲಿ 178 ಅತಿಕ್ರಮಣದಾರರ ಜಿಪಿಎಸ್ ಆಗದೇ ಭೂಒಡೆತನ ನೀಡುವ ಪ್ರಕ್ರಿಯೆ ನನೆಗುದಿದೆ ಬಿದ್ದಿದೆ. ಈ ಪ್ರಕ್ರಿಯೆ ಮುಗಿಯುವರೆಗೂ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬಾರದೆಂದು ಕಳೆದ ವರ್ಷ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು. ಅದಕ್ಕವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು. ಆದರೆ, ವಾರದಿಂದ ತಾಲೂಕಿನ ಸಾಂಬ್ರಾಣಿ, ರಾಮಾಪುರ, ಮಾಗವಾಡ ಮೊದಲಾದೆಡೆ ಅರಣ್ಯ ಇಲಾಖೆಯವರು ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆಸುತ್ತಿದ್ದು, ಜಮೀನಿನಲ್ಲಿ ಗುರುತು ಹಾಕುತ್ತಿದ್ದಾರೆ. ಈ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.