ಕುಶಾಲನಗರ:ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೇರಿದ ಜಾಗವನ್ನು ಅತಿಕ್ರಮಿಸಲು ಪ್ರಯತ್ನ ನಡೆಯುತ್ತಿದ್ದು, ಅತಿಕ್ರಮಣಕಾರರಿಂದ ಕಾಲೇಜು ಜಾಗವನ್ನು ಸಂರಕ್ಷಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಒತ್ತಾಯಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4 ದಶಕಗಳಿಂದ ಕಾಲೇಜಿನ ಹದ್ದುಬಸ್ತಿನಲ್ಲಿರುವ ಜಾಗವನ್ನು ಖಾಸಗಿ ಲೇಔಟ್‌ಗೆ ಸಂಬಂಧಿಸಿದವರು ಅತಿಕ್ರಮಿಸಲು ಪ್ರಯತ್ನಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಹಿಂದೆಯೂ ಕಾಲೇಜು ಜಾಗವನ್ನು ಅತಿಕ್ರಮಿಸುವ ಪ್ರಯತ್ನ ನಡೆದಿತ್ತು. ಆ ಸಂದರ್ಭದಲ್ಲಿ ಊರಿನ ಪ್ರಮುಖರು ಚರ್ಚೆ ನಡೆಸಿ, ಲೇಔಟ್‌ಗೆ ತೆರಳಲು ರಸ್ತೆ ಬಿಟ್ಟುಕೊಡಲಾಗಿತ್ತು. ಅದರ ಸಲುವಾಗಿ ಲೇಔಟ್ ಮಾಲೀಕರು ಶಾಲೆಗೆ ಕೊಠಡಿಯನ್ನು ಕೊಡುಗೆಯಾಗಿ ನೀಡಿದ್ದರು. ಇದೀಗ ಮತ್ತೆ ಕಾಲೇಜು ಜಾಗ ಅತಿಕ್ರಮಿಸುವ ಪ್ರಯತ್ನ ನಡೆಯುತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಂಡು ಕಾಲೇಜು ಜಾಗವನ್ನು ಸಂರಕ್ಷಿಸಬೇಕು. ತಪ್ಪಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಮುಖಂಡರು ಲಿಖಿತವಾಗಿ ದೂರು ನೀಡಲಾಗಿದೆ. ಕಾಂಗ್ರೆಸ್ ಮುಖಂಡರು ಹಾಗೂ ಊರಿನ ಪ್ರಮುಖರು ಇದ್ದರು.