ಹಾಸನ: ಇಡೀ ರಾಜ್ಯದಲ್ಲಿ ಹಾಲು ಉತ್ಪಾದನೆ ಕುಂಠಿತವಾಗಿದ್ದರೂ, ನಮ್ಮ ಒಕ್ಕೂಟದಲ್ಲಿ ಮಾತ್ರ ಹೆಚ್ಚಾಗುತ್ತಿದೆ. ಹಾಸನ ಹಾಲು ಒಕ್ಕೂಟ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಹೇಳಿದರು.
ನಗರದಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಸೋಮವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆ ಮತ್ತು ಸೌಲಭ್ಯ ವಿತರಣೆ, ನೂತನ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 540 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೇರಿ 2024 ಮಾರ್ಚ್ ವೇಳೆಗೆ ಉದ್ಘಾಟನೆ ಮಾಡಲಾಗುವುದು ಎಂದರು.
ರಾಜ್ಯದಲ್ಲೇ ನಮ್ಮ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಅತೀ ಹೆಚ್ಚು (ಪ್ರತಿ ಲೀಟರ್‌ಗೆ 40 ರೂ.) ದರವನ್ನು ನೀಡಲಾಗುತ್ತಿದೆ. ನಾನು ಒಕ್ಕೂಟದ ಅಧ್ಯಕ್ಷನಾದ ವೇಳೆ 20 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಪ್ರಸ್ತುತ 12.50 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಹಾಲಿನ ಡೇರಿ ತೆರೆಯುವ ಗುರಿಯನ್ನು ಹಾಸನ ಹಾಲು ಒಕ್ಕೂಟ ಹೊಂದಿದೆ. ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಒಟ್ಟು 25 ಸಾವಿರ ರಬ್ಬರ್ ಮ್ಯಾಟ್, 655 ಚಾಪ್ ಕಟರ್, 300 ಹಾಲು ಕರೆಯುವ ಯಂತ್ರಗಳನ್ನು ಶೇ.50 ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಒಕ್ಕೂಟದಲ್ಲಿ ಪ್ರಸ್ತುತ 1,700 ಸಂಘಗಳು ಕಾರ್ಯನಿರ್ವಹಿಸುತ್ತಿವೆ. 222 ಬಿಎಂಸಿ ಕೇಂದ್ರಗಳು ಚಾಲ್ತಿಯಲ್ಲಿವೆ. 2022-23ನೇ ಸಾಲಿನಲ್ಲಿ 1961 ಕೋಟಿ ರೂ. ವಹಿವಾಟು ನಡೆಸಿದ್ದು, 2023-24ನೇ ಸಾಲಿನಲ್ಲಿ 2500 ಕೋಟಿ ರೂ. ವಹಿವಾಟು ನಡೆಸಲು ಉದ್ದೇಶಿಸಲಾಗಿದೆ. ಸೆಪ್ಟೆಂಬರ್‌ವರೆಗೆ 1107 ಕೋಟಿ ರೂ. ವಹಿವಾಟಾಗಿದೆ. ಹಾಲು ಉತ್ಪಾದಕರಿಗೆ ಕಳೆದ ತಿಂಗಳು 135 ಕೋಟಿ ರೂ. ಬಟವಾಡೆ ಮಾಡಲಾಗಿದೆ. ಒಕ್ಕೂಟಕ್ಕೆ ಬಂದ 55 ಕೋಟಿ ರೂ. ಲಾಭವನ್ನು ರೈತರಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ನಮ್ಮ ಒಕ್ಕೂಟದಿಂದ ತೆಲಂಗಾಣ, ಹೈದರಾಬಾದ್‌ಗೆ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಲಡಾಕ್, ಕಾಶ್ಮೀರದಲ್ಲಿ ಭಾರತೀಯ ಸೇನೆಗೆ ಹಾಲು ಸರಬರಾಜು ಮಾಡಲಾಗುತ್ತಿದೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಹಾಸನ ಒಕ್ಕೂಟದಲ್ಲಿ ಉತ್ಪಾದನೆಯಾಗುವ ಹಾಲನ್ನು ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ಸೈನಿಕರಿಗೆ ಸರಬರಾಜು ಮಾಡುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಜತೆಗೆ ಡೇರಿಗಳ ಮೂಲಕ ಜಿಲ್ಲೆಯ ಜನರಿಗೆ ಉದ್ಯೋಗವನ್ನೂ ಕಲ್ಪಿಸಿಕೊಡಲಾಗುತ್ತದೆ. ಈ ಬಾರಿ ಮಳೆ ಕೈ ಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಹೈನುಗಾರಿಕೆ ರೈತರಿಗೆ ನೆರವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಮಾತನಾಡಿ, ರೈತರಿಗೂ ಉನ್ನತ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಎಚ್.ಡಿ.ರೇವಣ್ಣ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಜಿಲ್ಲೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಡಿಪ್ಲೋಮಾ ಕಾಲೇಜು-ಹಾಸ್ಟೆಲ್‌ಗಳನ್ನು ತೆರೆದು ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ನೆರವಾಗಿದ್ದಾರೆ. ನಾನು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಪೋಷಕರ ಸಭೆ, ಹೆಚ್ಚುವರಿ ತರಗತಿ ತೆಗೆದುಕೊಂಡ ಪರಿಣಾಮ 2019ರಲ್ಲಿ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದುಕೊಂಡಿತು. ಇನ್ನೂ ಹೆಚ್ಚಿನ ಸಾಧನೆ ಮಾಡಲು ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ಒಕ್ಕೂಟದ ನಿರ್ದೇಶಕ ನಾಗರಾಜು, ಜಗದೀಶ್, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ ಮತ್ತಿತರರು ಹಾಜರಿದ್ದರು.