ಹನೂರು: ಕ್ಷೇತ್ರ ವ್ಯಾಪ್ತಿಯ ಬಹುತೇಕ ಗಿರಿಜನರ ಕುಟುಂಬಗಳಿಗೆ ವಾಸಿಸಲು ಮನೆಯಿಲ್ಲ, ಕುಡಿಯಲು ಯೋಗ್ಯ ನೀರಿಲ್ಲ, ಸಮರ್ಪಕ ರಸ್ತೆಯಿಲ್ಲ. ವಿದ್ಯುತ್ ಸೇರಿದಂತೆ ಅಗತ್ಯ ಸೌಕರ್ಯಗಳಿಂದ ವಂಚಿತರಾಗಿದ್ದು, ಸೋಲಿಗರು ಕಷ್ಟದ ನಡುವೆ ಅತಂತ್ರ ಸ್ಥಿತಿಯಲ್ಲಿ ಬದುಕು ದೂಡುವಂತಾಗಿದೆ.
ಜಿಲ್ಲೆಯಲ್ಲಿಯೇ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರಿದ್ದಾರೆ. 88 ಪೋಡು, ಹಾಡಿಗಳಲ್ಲಿ ಹಲವು ದಶಕಗಳಿಂದಲೂ ವಾಸಿಸುತ್ತಿದ್ದಾರೆ. ಇಲ್ಲಿ 3,849 ಕುಟುಂಬಗಳಿದ್ದು, ಸುಮಾರು 25 ಸಾವಿರ ಜನಸಂಖ್ಯೆ ಹೊಂದಿದೆ. ಬಹುತೇಕ ಸೋಲಿಗರು ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಸರ್ಕಾರ ಪೌಷ್ಟಿಕ ಆಹಾರ ವಿತರಣೆ, ಕೃಷಿ ಮಾಡಲು ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಇನ್ನಿತರ ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಆದರೆ ವಾಸಿಸಲು ಮನೆ, ವಿದ್ಯುತ್, ಕುಡಿಯುವ ನೀರು, ಅಗತ್ಯ ಮೂಲ ಸೌಕರ್ಯಗಳೇ ಇಲ್ಲ.
1,884 ಕುಟುಂಬಗಳಿಗೆ ಸ್ವಂತ ಸೂರಿಲ್ಲ: ಗಿರಿಜನರ ಕುಟುಂಬಗಳಿಗೆ 1990ರಲ್ಲಿ ಸರ್ಕಾರ ಮನೆಗಳನ್ನು ನಿಮಿಸಿಕೊಟ್ಟಿತ್ತು. ಈ ಮನೆಗಳ ಛಾವಣಿ ಶಿಥಿಲಗೊಂಡಿದೆ. ಮಳೆ ಬಂದರೆ ನೀರು ಸೋರುತ್ತದೆ. ಗೋಡೆಗಳು ಬಿರುಕು ಬಿಟ್ಟಿದ್ದು, ಶಿಥಿಲಾವಸ್ಥೆ ಲುಪಿದೆ. ಈಗಿದ್ದರೂ ಗಿರಿಜನರು ವಿಧಿಯಿಲ್ಲದೇ ಜೀವನ ನಡೆಸುತ್ತಿರುವುದು ಒಂದೆಡೆಯಾದರೆ, ಜನಸಂಖ್ಯೆಗೆ ಅನುಗುಣವಾಗಿ ವಾಸಿಸಲು ಮನೆಗಳಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ 3,849 ಕುಟುಂಬಗಳಿದ್ದು, ಇದರಲ್ಲಿ 1,884 ಕುಟುಂಬಗಳಿಗೆ ಮನೆಯೇ ಇಲ್ಲ. ಇದರಲ್ಲಿ ಹೆಚ್ಚಿ ಗಿರಿಜನರು ವಾಸಿಸುವ ಗ್ರಾಮಗಳಾದ ರಾಚಪ್ಪಾಜಿ ನಗರದಲ್ಲಿ 145 ಕುಟುಂಬಗಳಲ್ಲಿ 48 ಕುಟುಂಬಗಳಿಗೆ ಮನೆ ಇಲ್ಲ. ಗಾಣಿಗ ಮಂಗಲದಲ್ಲಿ 40, ಕಗ್ಗಲಿಗುಂದಿಯಲ್ಲಿ 38, ಸೇಬಿನಕೋಬೆಯಲ್ಲಿ 31, ಕೌಳಿಹಳ್ಳದಲ್ಲಿ 30, ಮಾವತ್ತೂರಿನಲ್ಲಿ 32, ಹಾವಿನಮೂಲೆಯಲ್ಲಿ 36, ನಲ್ಲಿಕತ್ತರಿಯಲ್ಲಿ 40, ಕೆರೆದಿಂಬದಲ್ಲಿ 31, ಗುಳ್ಯದ ಬೈಲಿನಲ್ಲಿ 50, ಅರೆಕಡುವಿನ ದೊಡ್ಡಿಯಲ್ಲಿ 40, ಹಿರಿಯಂಬಲದಲ್ಲಿ 98, ಅರ್ಧನಾರಿಪುರದಲ್ಲಿ 41, ಕೋಣನಕೆರೆಯಲ್ಲಿ 52 ಕುಟುಂಬಗಳಿಗೆ ವಾಸಿಸಲು ಸ್ವಂತ ಸೂರು ಇಲ್ಲದಂತಾಗಿದೆ. ಇದರಿಂದ ಒಂದೇ ಮನೆಯಲ್ಲಿ 2-3 ಕುಟುಂಬಗಳು ವಾಸಿಸಬೇಕಾದ ಅನಿವಾರ್ಯತೆ ಇದೆ.
ಗುಡಿಸಲಿನಲ್ಲಿಯೇ ವಾಸ: ಪ್ರಸ್ತುತ ಗಿರಿಜನರ ಜನಸಂಖ್ಯೆಗೆ ಅನುಗುಣವಾಗಿ ಮನೆಗಳಿಲ್ಲ. ಇದರಿಂದ ಕೆಲವರು ಅಣ್ಣ, ತಮ್ಮಂದಿರು ಹಾಗೂ ತಂದೆ, ತಾಯಿ ಮನೆಯ ಸಮೀಪದಲ್ಲಿಯೇ ಗುಡಿಸಲು ಹಾಕಿಕೊಂಡು ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಮಳೆ ಬಂದ ವೇಳೆಯಂತೂ ಇವರ ಪರಿಸ್ಥಿತಿ ಹೇಳತೀರದು. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿದಿದ್ದರೂ ಮನೆ ದೊರಕಿಸಿ ಕೊಡುವಲ್ಲಿ ಇಚ್ಛಾಶಕ್ತಿಯ ಕೊರತೆ ಕಾಡುತ್ತಿದೆ.
ಕುಡಿಯುವ ನೀರಿನ ಸಮಸ್ಯೆ: ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಹಾಡಿಗಳು ಅರಣ್ಯ ಪ್ರದೇಶ ಹಾಗೂ ಕಾಡಂಚಿನಲ್ಲಿವೆ. ಇಲ್ಲಿನ ಜನರು ಈ ಹಿಂದೆ ಹಳ್ಳಕೊಳ್ಳದ ನೀರನ್ನೇ ಕುಡಿಯಲು ಉಪಯೋಗಿಸುತ್ತಿದ್ದರು. ಈಗಲೂ ಕೆಲವೊಂದು ಹಾಡಿಗಳಲ್ಲಿ ಕುಡಿವ ನೀರಿಗೆ ಝರಿ ಹಾಗೂ ಹಳ್ಳಕೊಳ್ಳಗಳೇ ಮೂಲಾಧಾರ. ಗ್ರಾಪಂ ವತಿಯಿಂದ ನೀರಿನ ಸೌಕರ್ಯ ಕಲ್ಪಿಸಿದ್ದರೂ ಕೆಲವೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಾಗ್ಗೆ ತಲೆದೋರುತ್ತಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಂತೂ ಗಿರಿಜನರು ಕುಡಿವ ನೀರಿಗಾಗಿ ಪರತಪಿಸುವ ಪಾಡು ಅಷ್ಟಿಷ್ಟಲ್ಲಾ. ಆದ್ದರಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಹೆಚ್ಚು ತಲೆದೋರುವ ಮೆದಗನಾಣೆ, ನಲ್ಲಿಕತ್ತರಿ, ಕೆರೆದಿಂಬ, ಗೊಂಬೆಗಲ್ಲು, ಕಡಕಲಕಂಡಿ, ಪಾಲರ್, ಹಾವಿನ ಮೂಲೆ ಹಾಗೂ ಆಲಂಬಾಡಿ ಗ್ರಾಮಗಳಿಗೆ ಕುಡಿಯುವ ನೀರಿನ ಸೌಕರ್ಯವನ್ನು ಒದಗಿಸಿ ಕೊಡುವಂತೆ ಗಿರಿಜನರಿಂದ ಒತ್ತಾಯ ಕೇಳಿ ಬಂದಿದೆ.
ಸಮರ್ಪಕ ರಸ್ತೆ, ವಿದ್ಯುತ್ ಸೌಕರ್ಯವಿಲ್ಲ: ಅರಣ್ಯ ಪ್ರದೇಶ ಹಾಗೂ ಕಾಡಂಚಿನಲ್ಲಿ ವಾಸಿಸುವ ಗಿರಿಜನರಿಗೆ ಮುಖ್ಯ ರಸ್ತೆಯಿಂದ ಹಾಡಿಗಳಿಗೆ ಸಂಪರ್ಕಿಸಲು ಸಮರ್ಪಕ ರಸ್ತೆ ಇಲ್ಲ. ಕೆಲವೊಂದು ಹಾಡಿಗಳಿಗೆ ತಕ್ಕಮಟ್ಟಿಗೆ ಮೆಟ್ಲಿಂಗ್ ರಸ್ತೆ ನಿರ್ಮಿಸಲಾಗಿದೆ. ಆದರೆ ಮಳೆಗಾಲದ ವೇಳೆ ಸಂಚರಿಸಲು ಇಲ್ಲಿನ ಜನರು ತುಂಬ ತೊಂದರೆ ಅನುಭವಿಸಬೇಕಿದೆ. ಇದರಲ್ಲಿ ಎಲಚಿಕೆರೆ, ಕೆರೆದಿಂಬ, ಗೊಂಬೆಗಲ್ಲು, ನಲ್ಲಿಕತ್ತರಿ, ಸೇಬಿನಕೋಬೆ, ದೋಣಮಡುವಿನ ದೊಡ್ಡಿ, ಕಕ್ಕೆಹೊಲ, ಸೊಪ್ಪಿನಗುಡ್ಡೆ ಹಾಗೂ ಇನ್ನು ಕೆಲವು ಗ್ರಾಮಗಳು ಸೇರಿವೆ. ವಿದ್ಯುತ್ ಸೌಕರ್ಯಕ್ಕಾಗಿ ಸೋಲಾರ್ ಮೂಲಕ ಬೆಳಕಿನ ವ್ಯವಸ್ತೆ ಕಲ್ಪಿಸಲಾಗಿದೆ. ಆದರೆ ಸೋಲಾರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಹಾಡಿಗಳಲ್ಲಿ ಕೆಲ ಮನೆಗಳಿಗೆ ವಿದ್ಯುತ್ ಸೌಕರ್ಯವೇ ಇಲ್ಲ. ಇದರಿಂದ ಕಾಡು ಪ್ರಾಣಿಗಳ ಕಾಟದ ನಡುವೆ ರಾತ್ರಿಯನ್ನು ಕತ್ತಲೆಯಲ್ಲೇ ಕಳೆಯಬೇಕಿದೆ. ವಿದ್ಯುತ್ ಸೌಕರ್ಯವನ್ನು ಒದಗಿಸುವಂತೆ ಹಲವು ವರ್ಷಗಳಿಂದಲೂ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಗಿರಿಜನರ ಆರೋಪ.
ಮನೆಯ ಗೋಡೆ ಹಾಗೂ ಛಾವಣಿ ಸಂಪೂರ್ಣ ಹಾಳಾಗಿದ್ದು, ಕುಸಿಯುವ ಹಂತದಲ್ಲಿದೆ. ಮಳೆ ಬಂದರೆ ನೀರು ಸೋರುತ್ತದೆ. ಮಳೆಗಾಲದ ವೇಳೆ ನೀರನ್ನು ಹೊರಕ್ಕೆ ಹಾಕುವುದೇ ಒಂದು ದೊಡ್ಡ ಕೆಲಸವಾಗಿದೆ. ವಿಧಿಯಿಲ್ಲದೆ ಈ ಮನೆಯಲ್ಲೇ ವಾಸಿಸುತ್ತಿದ್ದೇನೆ. ಇನ್ನು ವಿದ್ಯುತ್ ಸೌಕರ್ಯವಿಲ್ಲದ ಪರಿಣಾಮ ಬೆಂಕಿಯ ಬೆಳಕಿನಲ್ಲಿಯೇ ಕತ್ತಲೆಯನ್ನು ಕಳೆಯಬೇಕಿದ್ದು, ತುಂಬ ತೊಂದರೆ ಅನುಭವಿಸುತ್ತಿದ್ದೇನೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಮುಖ್ಯವಾಗಿ ಮನೆ ಹಾಗೂ ವಿದ್ಯುತ್ ಸೌಕರ್ಯವನ್ನು ಕಲ್ಪಿಸಬೇಕು. ಹನುಮಮ್ಮ ಸೇಬಿನಕೋಬೆ ಹಾಡಿಯ ನಿವಾಸಿ ಗ್ರಾಮದಲ್ಲಿ 30 ವರ್ಷದ ಹಿಂದೆ ಸರ್ಕಾರದಿಂದ 30 ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಆದರೆ ಹಲವು ವರ್ಷಗಳಿಂದ ಈ ಮನೆಗಳು ಶಿಥಿಲಗೊಂಡಿದ್ದು, ಮಳೆ ಬಂದರೆ ತುಂಬಾ ಸಮಸ್ಯೆಯನ್ನು ಎದುರಿಸಲಾಗುತ್ತಿದೆ. ಮನೆ ನಿರ್ಮಿಸಿ ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಿಕ್ಕಮಾದೇಗೌಡ ಕೌಳಿಹಳ್ಳ ಡ್ಯಾಂ ಹಾಡಿ ನಿವಾಸಿ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ 88 ಗಿರಿಜನರ ಪೋಡುಗಳಿದ್ದು, 25 ಸಾವಿರ ಜನಸಂಖ್ಯೆ ಇದೆ. ಬಹುತೇಕ ಜನರಿಗೆ ವಾಸಿಸಲು ಮನೆಯಿಲ್ಲ. ಸಮರ್ಪಕ ರಸ್ತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕೊರತೆ ಇದೆ. ಇದರಿಂದ ಇಲ್ಲಿನ ಜನರು ಜೀವನ ನಡೆಸಲು ಕಷ್ಟಪಡುವಂತಾಗಿದೆ. ಮೂಲ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಮೂಲ ಸೌಕರ್ಯವನ್ನು ಒದಗಿಸಲು ಮುಂದಾಗಬೇಕು. ಸಿ. ಮಾದೇಗೌಡ ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘ ಚಾ.ನಗರ. ಹನೂರು ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2,900 ಮನೆಗಳನ್ನು ಮಂಜೂರು ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿದ್ದಾರೆ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ವಸತಿ ಸಚಿವರ ಗಮನಕ್ಕೆ ತಂದಿದ್ದಾರೆ. ಮನೆಗಳು ಮಂಜೂರು ಆಗಬೇಕಿದೆ. ಇನ್ನು ವಿದ್ಯುತ್ ಸೌಕರ್ಯವಿಲ್ಲದ ಮನೆಗಳ ಬಗ್ಗೆ ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ರಾಜೇಶ್ ಸಹಾಯಕ ನಿರ್ದೇಶಕ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕೊಳ್ಳೇಗಾಲ