ಜಿಲ್ಲೆ

ಅತಂತ್ರ ಸ್ಥಿತಿ, ಹೊಂದಾಣಿಕೆ ಮಂತ್ರ

ನವಲಗುಂದ: ಹದಿನೆಂಟು ತಿಂಗಳು ಬಳಿಕ ನವಲಗುಂದ ಪುರಸಭೆ ಆಡಳಿತದ ಚುಕ್ಕಾಣಿ ಹಿಡಿಯುವ ಭಾಗ್ಯ ಒಲಿದು ಬಂದಿರುವುದು ಸದಸ್ಯರಲ್ಲಿ ಪೈಪೋಟಿ ಹೆಚ್ಚಳಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರವು ನವಲಗುಂದ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ಪ್ರಕಟಿಸಿದೆ. 23 ವಾರ್ಡ್​ಗಳಲ್ಲಿ ಕಾಂಗ್ರೆಸ್ 7, ಬಿಜೆಪಿ 6, ಜೆಡಿಎಸ್ 9, ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಈ ಪೈಕಿ 10 ಮಹಿಳೆಯರು, 13 ಪುರುಷ ಸದಸ್ಯರಿದ್ದು, ಅಧಿಕಾರಕ್ಕೇರಲು ಸಕಲ ಸಿದ್ಧತೆ ನಡೆಸಿದ್ದಾರೆ.

ಹಿಂದೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಟಗೊಂಡ ಮೀಸಲಾತಿಯಿಂದ ಅಸಮಾಧಾನಗೊಂಡು ಜನಪ್ರತಿನಿಧಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದರಿಂದಾಗಿ ಪುರಸಭೆಗೆ ಆಡಳಿತ ಭಾಗ್ಯವಿಲ್ಲದಂತಾಗಿತ್ತು. ಈಗ ಮೀಸಲಾತಿ ಪ್ರಕಟವಾಗಿದ್ದು, ಅಧಿಕಾರಕ್ಕೇರಲು 13 ಸದಸ್ಯರ ಬಲ ಬೇಕು. ಆದರೆ, ಮೂರೂ ಪಕ್ಷಗಳಿಗೆ ಬಹುಮತವಿಲ್ಲದ ಕಾರಣ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಜೆಡಿಎಸ್ ಭಾರಿ ಕಸರತ್ತು: ಪಪಂನಲ್ಲಿ 9 ಸದಸ್ಯ ಬಲವುಳ್ಳ ಜೆಡಿಎಸ್​ಗೆ ಪಕ್ಷೇತರ ಸದಸ್ಯ ಅಪ್ಪಣ್ಣ ಹಳ್ಳದ ಸೇರ್ಪಡೆಯಿಂದ ಅದರ ಸಂಖ್ಯಾಬಲ 10ಕ್ಕೇರಿದೆ. ಹೀಗಾಗಿ ಕಾಂಗ್ರೆಸ್ ಸದಸ್ಯರ ಮನವೊಲಿಸಿ ಆಡಳಿತ ಚುಕ್ಕಾಣಿ ಹಿಡಿಯಲು ಜೆಡಿಎಸ್ ಭಾರಿ ಕಸರತ್ತು ನಡೆಸಿದೆ. ಜೆಡಿಎಸ್​ನಿಂದ ಎರಡನೇ ಬಾರಿ ಆಯ್ಕೆಯಾದ ಪ್ರಕಾಶ ಶಿಗ್ಲಿ, ಅಪ್ಪಣ್ಣ ಹಳ್ಳದ, ಸುರೇಶ ಮೇಟಿ ಅಧ್ಯಕ್ಷ ಸ್ಥಾನ ಹಾಗೂ ಹುಸೇನಬಿ ಧಾರವಾಡ, ಚಂದ್ರಕಲಾ ಮಳಗಿ ಅವರು ಉಪಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಪುರಸಭೆಯಲ್ಲೂ ಕೈ, ಕಮಲ ಮೈತ್ರಿ?: ತಾಪಂನಲ್ಲಿ ಈ ಹಿಂದೆ ಕಾಂಗ್ರೆಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದವು. ಅವೀಗ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಹಂಚಿಕೊಂಡು ಅಧಿಕಾರ ನಡೆಸಲು ಬಿಜೆಪಿ ಸ್ಥಳೀಯ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಬೆಂಬಲ ಪಡೆಯಲು ಸಜ್ಜಾಗಿವೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಶರಣಪ್ಪ ಹಕ್ಕರಕಿ, ಮಹಾಂತೇಶ ಕಲಾಲ, ಕಾಂಗ್ರೆಸ್ ಶಿವಾನಂದ ತಡಸಿ, ಮಂಜುನಾಥ ಜಾಧವ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಜ್ಯೋತಿ ಗೊಲ್ಲರ, ಕಾಂಗ್ರೆಸ್ ಖೈರುನಬಿ ನಾಶಿಪುಡಿ, ಫರೀದಾಬೇಗಂ ಬಬರ್ಚಿ, ಮಂಜುಳಾಬಾಯಿ ಜಾಧವ ಆಕಾಂಕ್ಷಿಗಳಾಗಿದ್ದಾರೆ.