ಅಣ್ಣಿಗೇರಿ: ಟ್ರಸ್ಟ್ ಅಧ್ಯಕ್ಷರ ವರ್ತನೆಯಿಂದ ಬೇಸತ್ತು ಕಳೆದ ಆರೇಳು ತಿಂಗಳಿಂದ ಶ್ರೀಮಠದಿಂದ ದೂರ ಉಳಿದಿದ್ದ ಪಟ್ಟಣದ ದಾಸೋಹಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಗುರುವಾರ ಮಠಕ್ಕೆ ಮರಳಿದ್ದಾರೆ.
ಗುರುಗಳಿಲ್ಲದ ಕಾರಣ ಶ್ರೀಮಠದಲ್ಲಿ ಕಳೆ ಇಲ್ಲದಂತಾಗಿತ್ತು. ಧಾರ್ವಿುಕ ಕಾರ್ಯಕ್ರಮಗಳಿಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಹೀಗಾಗಿ ಹೇಗಾದರೂ ಮಾಡಿ ಗುರುಗಳನ್ನು ಮತ್ತೆ ಮಠಕ್ಕೆ ಕರೆದುಕೊಂಡು ಬರುವಂತೆ ಭಕ್ತ ಸಮೂಹ ಟ್ರಸ್ಟ್ ಸದಸ್ಯರ ಮೇಲೆ ಒತ್ತಡ ಹಾಕಿತ್ತು. ಅಲ್ಲದೆ, ಪಟ್ಟಣದ ಗುರು ಹಿರಿಯರು ಹಾಗೂ ಸದ್ಭಕ್ತರು ಸಭೆ ಸೇರಿ ಶ್ರೀಗಳನ್ನು ಮರಳಿ ಮಠಕ್ಕೆ ಕರೆತರಲು ನಿರ್ಣಯಿಸಿದ್ದರು. ಗುರುಗಳು ಕಾಶಿಯಲ್ಲಿರುವುದನ್ನು ಮನಗಂಡು ಅವರೊಂದಿಗೆ ದೂರವಾಣಿ ಮೂಲಕ ಸಂರ್ಪಸಿ ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು.
ಗುರುವಾರ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಆಗಮಿಸಿದ ದಾಸೋಹಮಠದ ಭಕ್ತರು ಹಾಗೂ ಟ್ರಸ್ಟ್ ಸದಸ್ಯರು, ಶ್ರೀ ಸಿದ್ಧಾರೂಢರ ಸನ್ನಿಧಿಯಲ್ಲಿ ವಿವಿಧ ಮಠಗಳ ಮಠಾಧೀಶರು ಹಾಗೂ ಶರಣ ಗಣದ ಸಮ್ಮುಖದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದರು. ದಾಸೋಹಮಠದಲ್ಲಿ ಟ್ರಸ್ಟ್ ಅಧ್ಯಕ್ಷರಿಂದ ಆದ ಅಪಮಾನ ಕುರಿತು ಶ್ರೀಗಳು ಭಕ್ತರಿಗೆ ತಿಳಿಸಿದರು. ‘ಭಕ್ತ ಸಮೂಹ ಸದಾಕಾಲ ನಿಮ್ಮೊಂದಿಗೆ ಇರುತ್ತದೆ. ತಾವು ದಯವಿಟ್ಟು ಮತ್ತೆ ಶ್ರೀಮಠಕ್ಕೆ ಬರಬೇಕು’ ಎಂದು ಭಕ್ತ ಗಣ ಶ್ರೀಗಳಲ್ಲಿ ಭಿನ್ನವಿಸಿಕೊಂಡಿತು. ಸಕಾರಾತ್ಮಕವಾಗಿ ಸ್ಪಂದಿಸಿದ ಗುರುಗಳು ನಿಮ್ಮೊಂದಿಗೆ ಈಗಲೇ ಮಠಕ್ಕೆ ಬರುತ್ತೇನೆ ಎಂದು ಘೊಷಿಸಿ ಸಿದ್ಧಾರೂಢ ಮಠದಿಂದ ಅಣ್ಣಿಗೇರಿಯ ದಾಸೋಹ ಮಠದತ್ತ ಹೆಜ್ಜೆ ಹಾಕಿದರು. ಸಂಜೆ ವೇಳೆ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಅಣ್ಣಿಗೇರಿ ಪಟ್ಟಣದಲ್ಲಿ ಸಕಲ ವಾದ್ಯ ಮೇಳದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನನಗೆ ಟ್ರಸ್ಟ್ನ ಕೆಲ ಸದಸ್ಯರಿಂದ ಅಪಮಾನವಾಗಿತ್ತು. ಈ ಬಗ್ಗೆ ಇತರ ಸದಸ್ಯರ ಮುಂದೆ ಹೇಳಿಕೊಂಡರೂ ಪ್ರಯೋಜನವಾಗಿರಲಿಲ್ಲ. ಶ್ರೀ ಸಿದ್ಧಾರೂಢರ ಸನ್ನಿಧಿಯಲ್ಲಿ ಹಲವಾರು ಶರಣರ ಹಾಗೂ ಅಣ್ಣಿಗೇರಿಯ ದಾಸೋಹಮಠದ ಸಮಸ್ತ ಭಕ್ತರ ಸಮ್ಮುಖದಲ್ಲಿ ಈ ಬಗ್ಗೆ ರ್ಚಚಿಸಿ, ಭಕ್ತರ ಆಶಯದಂತೆ ದಾಸೋಹಮಠಕ್ಕೆ ಬರಲು ನಿರ್ಧರಿಸಿದೆ.| ಶ್ರೀ ಶಿವಕುಮಾರ ಸ್ವಾಮೀಜಿ, ದಾಸೋಹಮಠ ಅಣ್ಣಿಗೇರಿ