ಹಿರಿಯ ಸಹೋದರ ಶ್ರೀಧರ್ ಮೃತನಾದ ಒಂದು ವರ್ಷದ ದಿನದಂದೇ ಮೃತ ಪಟ್ಟಿರುವ ತಮ್ಮ ದಿಲೀಪ 
ಜಿಲ್ಲೆ

ಅಣ್ಣ ಮೃತಪಟ್ಟ ವರ್ಷಕ್ಕೆ ತಮ್ಮನೂ ಸಾವು

ಬೇಲೂರು: ತಾಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ಅಣ್ಣ ಮೃತಪಟ್ಟ ದಿನಾಂಕದಂದೇ ತಮ್ಮನೂ ಮೃತಪಟ್ಟಿದ್ದಾನೆ.
ತಾಲೂಕಿನ ನೆಟ್ಟೆಕೆರೆ ಗ್ರಾಮದ ಪುಟ್ಟಸ್ವಾಮಿ ಮತ್ತು ಸರೋಜ ದಂಪತಿ ಪುತ್ರ ದಿಲೀಪ್ ಮೃತರು. 2022ರ ಜ.9ರಂದು ಅನಾರೋಗ್ಯದಿಂದ ಅಣ್ಣ ಶ್ರೀಧರ್(22) ಮೃತಪಟ್ಟಿದ್ದ. ಒಂದು ವರ್ಷದ ನಂತರ ಅದೇ ದಿನಾಂಕದಂದು ಅಂದರೆ 2023ರ ಜ.9ರಂದು ಬೈಕ್ ಅಪಘಾತದಲ್ಲಿ ತಮ್ಮ ದಿಲೀಪ್(21) ಮೃತಪಟ್ಟಿರುವುದು ಪಾಲಕರು ಹಾಗೂ ಕುಟುಂಬದವರಿಗೆ ಆಘಾತವನ್ನುಂಟು ಮಾಡಿದೆ.
ಅಣ್ಣನ ವರ್ಷದ ಕಾರ್ಯಕ್ರಮದ ಪ್ರಯುಕ್ತ ದಿಲೀಪ್ ಬೈಕ್‌ನಲ್ಲಿ ಅಂಗಡಿಯಿಂದ ಪೂಜಾ ಸಾಮಗ್ರಿಗಳನ್ನು ತರುವಾಗ ಜ.4ರಂದು ಪಟ್ಟಣ ಸಮೀಪದ ರಾಯಪುರ ಗ್ರಾಮದ ತಿರುವು ರಸ್ತೆಯಲ್ಲಿ ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನು. ದಿಲೀಪ್‌ನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರದಿಂದ ಜೀವನ್ಮರಣದ ನಡುವೆ ಹೋರಾಟ ನಡೆಸಿ ಚಿಕಿತ್ಸೆಗೆ ಸ್ಪಂದಿಸದೆ ಜ.9ರಂದು ರಾತ್ರಿ ಮೃತಪಟ್ಟಿದ್ದಾನೆ.
ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಬುಧವಾರ ಮೃತರ ಸ್ವಗ್ರಾಮ ನೆಟ್ಟೆಕೆರೆ ಗ್ರಾಮದಲ್ಲಿ ದಿಲೀಪ್ ಅಂತ್ಯಕ್ರಿಯೆ ಮಾಡಲಾಯಿತು. ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.