ಮೈಸೂರು: ರಾಜ್ಯದ ಅಣೆಕಟ್ಟುಗಳ ಸುರಕ್ಷತೆ ಕುರಿತು ಸರ್ಕಾರವು ತಾಂತ್ರಿಕ ಸಮಿತಿ ರಚಿಸಿದ್ದು, ಈ ಸಮಿತಿ ವರದಿ ಬಂದ ನಂತರ ಅಗತ್ಯ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದರು.
ಭಾನುವಾರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಅಣೆಕಟ್ಟು ಗೇಟ್ ದುರಸ್ತಿಯಾದ ಬಳಿಕ ರಾಜ್ಯದ ಎಲ್ಲ ಅಣೆಕಟ್ಟುಗಳ ಸುರಕ್ಷತೆ ವಿಚಾರದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿದೆ. ಈ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬಟಾನಿಕಲ್ ಗಾರ್ಡನ್ ಮಾಡುವ ಯೋಜನೆ ನನೆಗುದಿಗೆ ಬಿದ್ದಿರುವ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಇದಕ್ಕೆ ಬಂಡವಾಳ ಹೂಡಿಕೆ ಮಾಡುವವರು ಮುಂದೆ ಬರಬೇಕು. ನಮ್ಮ ಆದ್ಯತೆ ಇರುವುದು ನೀರಿನ ಸಮರ್ಪಕ ಬಳಕೆ ಹಾಗೂ ಅಣೆಕಟ್ಟು ಸುರಕ್ಷತೆ ಬಗ್ಗೆ ಇದೆ ಎಂದು ಹೇಳಿದರು.
ದಿಢೀರ್ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, ನಾನು ಸಿಎಂಗೆ ಮಾಹಿತಿ ನೀಡಿ ನಾನು ಮೈಸೂರಿನ ಸಾಧನಾ ಸಮಾವೇಶದಿಂದ ಹೊರಟೆ. ಮಾರ್ಗ ಮಧ್ಯದಲ್ಲೇ ನನ್ನ ಬೆಂಗಾವಲು ವಾಹನ ಅಪಘಾತಕ್ಕೀಡಾಯಿತು.
ತಾಯಿ ಚಾಮುಂಡೇಶ್ವರಿ ಕೃಪೆ ಯಾರಿಗೂ ಅಪಾಯವಾಗಿಲ್ಲ. ವಕೀಲರ ಜತೆಗೆ ಸಭೆ ನಿಗದಿಯಾದ ಕಾರಣ, ನಾನು 7.30ಕ್ಕೆ ತೆರಳಿ, 9.30ಕ್ಕೆ ವಾಪಸ್ ಬಂದಿದ್ದೇನೆ. ನಂತರ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನನ್ನ ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೋಗಿದ್ದು, ಅದನ್ನು ಮುಗಿಸಿಕೊಂಡು ಬಂದಿದ್ದೇನೆ. ಇದರ ಹೊರತಾಗಿ ರಾಜಕಾರಣ ಇಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಯಾವಾಗಲೂ ನನ್ನ ಮೇಲೆ ಪ್ರೀತಿ ಜಾಸ್ತಿ. ನಾನು ಹೆಚ್ಚು ಬಲಿಷ್ಠವಾಗಿರುವುದಕ್ಕೆ ನನ್ನ ಮೇಲೆ ಪ್ರೀತಿ ಜಾಸ್ತಿ ಎಂದು ಲೇವಡಿ ಮಾಡಿದರು.