ಹನೂರು: ಪಟ್ಟಣದ ಅರಣ್ಯ ಇಲಾಖೆ ಕಚೇರಿ ಸಮೀಪದ ರಸ್ತೆಯ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಡುಕಾಗಿ ಪರಿಣಮಿಸಿದೆ.
ಈ ಮಾರ್ಗದ ರಸ್ತೆಯು ತಹಸೀಲ್ದಾರ್ ಕಚೇರಿ ಸೇರಿದಂತೆ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್, ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕೆಲವು ಶಾಲಾ ಕಾಲೇಜು ವಿದ್ಯಾರ್ಥಿಗಳು, ಪಾಲಕರು ಈ ರಸ್ತೆ ಮೂಲಕವೇ ಸಂಚರಿಸುತ್ತಾರೆ. ಅವರೆಲ್ಲರಿಗೂ ಸಂಚಾರಕ್ಕೆ ತೊಡಕಾಗಿದೆ.
ಈ ರಸ್ತೆಯ ಬದಿಯಲ್ಲಿ ಪತ್ರ ಬರಹಗಾರರ ಕಚೇರಿ, ಹೋಟೆಲ್, ಪ್ರಿಂಟಿಂಗ್ ಪ್ರೆಸ್‌ಇನ್ನಿತರ ವ್ಯಾಪಾರೋದ್ಯಮ ಮಳಿಗೆಗಳಿವೆ. ಇಲ್ಲಿಗೆ ಕೆಲಸಕ್ಕೆ ಬಂದವರು ಕಿರಿದಾದ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್‌ಗಳನ್ನು ಗಂಟೆಗಟ್ಟಲೇ ನಿಲ್ಲಿಸುತ್ತಿದ್ದಾರೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವವರಿಗೆ ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ.
ಸಂಬಂಧಪಟ್ಟವರು ಇತ್ತ ಗಮನಹರಿಸಿ ಬೈಕ್ ನಿಲುಗಡೆಗೆ ಕಡಿವಾಣ ಹಾಕಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.