ಮೈಸೂರು: ನಗರದ ರಂಗಾಯಣ ಕಳೆದ ಮೂರು ವರ್ಷಗಳಿಂದ ಎಡ ಹಾಗೂ ಬಲಪಂಥೀಯರ ನಡುವಿನ ವೈಚಾರಿಕ ಸಂಘರ್ಷಕ್ಕೆ ವೇದಿಕೆಯಾಗಿತ್ತು. ರಾಜ್ಯದಲ್ಲಿ ಬದಲಾದ ಸರ್ಕಾರ ಹಾಗೂ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ರಾಜೀನಾಮೆಯೊಂದಿಗೆ ಈ ವೈಚಾರಿಕ ಸಂಘರ್ಷಕ್ಕೆ ತೆರೆಬಿದ್ದಿದ್ದು, ಶನಿವಾರ ಸಮಾನ ಮನಸ್ಕ ರಂಗಕರ್ಮಿಗಳು, ರಂಗಾಸಕ್ತರು, ಪ್ರಗತಿಪರ ಚಿಂತಕರು ರಂಗಾಯಣದ ಆವರಣ ಪ್ರವೇಶಿಸಿದರು.
ಬಲಪಂಥೀಯ ಚಿಂತಕ ಅಡ್ಡಂಡ ಸಿ. ಕಾರ್ಯಪ್ಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಎಡಪಂಥೀಯ ಚಿಂತಕರು ರಂಗಾಯಣದ ಚಟುವಟಿಕೆಯಿಂದ ದೂರ ಉಳಿದುಕೊಂಡಿದ್ದರು. ಅಲ್ಲದೆ, ಹಲವು ಸಂದರ್ಭಗಳಲ್ಲಿ ಕಾರ್ಯಪ್ಪ ಅವರ ನಿಲುವಿನ ವಿರುದ್ಧ ಹೋರಾಟ ನಡೆಸಿದ್ದರು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ರಂಗಾಯಣದ ಚಟುವಟಿಕೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಲಾಮಂದಿರ ಆವರಣದಲ್ಲಿರುವ ಕಿಂದರಜೋಗಿ ಆವರಣದಲ್ಲಿ ಶನಿವಾರ ‘ರಂಗ ಸಂಸ್ಕೃತಿ ಉಳಿಸೋಣ-ಬೆಳೆಸೋಣ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಶುಕ್ರವಾರ ನಿಧನರಾದ ಸಾಹಿತಿ ಜಿ.ಎಚ್. ನಾಯಕ್ ಅವರ ಭಾವಚಿತ್ರದ ಮುಂದೆ ದೀಪ ಹಚ್ಚಿ, ಪುಷ್ಪ ನಮನ ಸಲ್ಲಿಸಿದರು. ನಂತರ ಆ ದೀಪವನ್ನು ಹಿಡಿದು ರಂಗಾಯಣವನ್ನು ಪ್ರವೇಶಿಸಿ ರಂಗಾಯಣ ಆವರಣದಲ್ಲಿರುವ ರಂಗಭೀಷ್ಮ ಬಿ.ವಿ. ಕಾರಂತರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಕಿಂದರಜೋಗಿ ಆವರಣಕ್ಕೆ ಮರಳಿದರು.
ಈ ಸಂದರ್ಭ ಮಾತನಾಡಿದ ರಂಗಾಯಣ ಮಾಜಿ ನಿರ್ದೇಶಕ ಜನಾರ್ದನ (ಜನ್ನಿ), ಕಳೆದ ಮೂರು ವರ್ಷಗಳಿಂದ ರಂಗಾಯಣ ಸೆರೆ ಮನೆಯಾಗಿತ್ತು. ಇದೀಗ ರಂಗಾಯಣ ಸೆರೆಮನೆಯಿಂದ ಬಿಡುಗಡೆ ಹೊಂದಿದ್ದು, ಗುರುಮನೆಯಾಗಿದೆ. ಹಾಗಾಗಿ ನಾವೆಲ್ಲರು ಗುರುಮನೆಗೆ ತೆರಳುತ್ತಿದ್ದೇವೆ ಎಂದರು.
ಸರ್ಕಾರ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸಂಸ್ಥೆಗಳ ಕುರಿತು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ರಾಜಕೀಯ ಪಕ್ಷಗಳು ಏನು ಬೇಕಾದರೂ ರಾಜಕೀಯ ಮಾಡಿಕೊಳ್ಳಲಿ. ಆದರೆ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು.
ಈ ಸಂದರ್ಭ ರಂಗಕರ್ಮಿಗಳಾದ ಮೈಮ್ ರಮೇಶ್, ಕೆ.ಆರ್. ಗೋಪಾಲಕೃಷ್ಣ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.