ವಿಜಯವಾಣಿ ಸುದ್ದಿಜಾಲ ಹಳಿಯಾಳ ಪಟ್ಟಣದಲ್ಲಿ ಗುರುವಾರ ಬೆಳಗಿನ ಜಾವ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಪಟ್ಟಣದ ಶ್ರೀಸಾಯಿ ಅಮೃತ ವಾಣಿಜ್ಯ ಸಂಕೀರ್ಣದಲ್ಲಿಯ ನಂದಿ ಬಸವೇಶ್ವರ ಲಿಂಗಾಯತ ಖಾನಾವಳಿಯಲ್ಲಿ ಈ ದುರ್ಘಟನೆ ಸಂಭವಿಸಿತ್ತು.
ಈರಣ್ಣಾ ಗಾಣಿಗೇರ ಎಂಬುವವರಿಗೆ ಸೇರಿದ ಈ ಖಾನಾವಳಿಯಲ್ಲಿ ಮುದ್ದೇಬಿಹಾಳದ ಜಗದೀಶ ಮಡಿವಾಳಕರ ಮತ್ತು ಹಳಿಯಾಳದ ಈರಪ್ಪ ಮಡ್ಡಿ ಎನ್ನುವ ಇಬ್ಬರು ಕಾರ್ಮಿಕರು ಕೆಲಸಕ್ಕಿದ್ದರು. ಗುರುವಾರ ಬೆಳಗಿನ ಜಾವ ಸಂಭವಿಸಿದ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಗದೀಶ ಮಡಿವಾಳಕರ
ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.