ಶಿಕಾರಿಪುರ: ಎಲ್‌ಪಿಜಿ ಹಾಗೂ ಅಗತ್ಯ ವಸ್ತುಗಳು ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ವೀಕ್ಷಕ ಎನ್.ರಮೇಶ್ ಮಾತನಾಡಿ, ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಬಡವರ ವಿರೋಧಿಯಾಗಿದೆ. ಅಡುಗೆ ಅನಿಲದ ಬೆಲೆ ಗಗನಕ್ಕೇರುತ್ತಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಇದ್ದಕ್ಕಿದ್ದಂತೆ ಜಾಸ್ತಿ ಮಾಡಲಾಗಿದೆ. ಇದರಿಂದ ಸಣ್ಣ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಕೈಗೆಟುಕದಿರುವ ಕಾರಣ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ದೂರಿದರು. ಬಿಜೆಪಿಯ ಭ್ರಷ್ಟ ಮತ್ತು ಜನವಿರೋಧಿ ಆಡಳಿತದಿಂದ ಜನರು ಬೇಸತ್ತಿದ್ದು, ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ. ಅಧಿಕಾರಕ್ಕೆ ಬಂದರೆ ನಾವು ನೀಡಿರುವ ಭರವಸೆಗಳನ್ನು ಅಕ್ಷರಶಃ ಈಡೇರಿಸುತ್ತೇವೆ. ಹಿಂದೆ ಕಾಂಗ್ರೆಸ್ ನೀಡಿದ್ದ ಆಶ್ವಾಸನೆಗಳನ್ನು ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಈಡೇರಿಸಿತ್ತು. ಕಾಂಗ್ರೆಸ್ ಸುಳ್ಳು ಆಶ್ವಾಸನೆಗಳನ್ನು ನೀಡುವುದಿಲ್ಲ ಎಂದರು.