ಕುಶಾಲನಗರ: ಹುದುಗೂರು ಗ್ರಾಮದ ಸಮೀಪವಿರುವ ಪೂವಣ್ಣ ಮತ್ತು ಶಿವಣ್ಣ ಎಂಬುವರ ಮನೆಯ ಅಂಗಳದಲ್ಲಿ ಶೇಖರಿಸಿ ಇಟ್ಟಿದ್ದ ಅಡಕೆ, ಸಿಹಿಗೆಣಸು ಬೆಳೆಯನ್ನು ಇತ್ತೀಚೆಗೆ ಕಾಡಾನೆಗಳ ಹಿಂಡು ತಿಂದು ಹಾಕಿದೆ.
ಜಮೀನುಗಳಲ್ಲಿ ಅಪಾರ ಪ್ರಮಾಣದ ಬೆಳೆಗಳನ್ನು ತಿಂದು, ತುಳಿದು ನಾಸಪಡಿಸಿದ ಬಳಿಕ ಮನೆ ಅಂಗಳದಲ್ಲಿದ್ದ ಅಡಕೆ ಮತ್ತು ತೆಂಗಿನ ಮರಗಳನ್ನು ಬೀಳಿಸಿ ತುಳಿದು ಹಾನಿ ಮಾಡಿವೆ. ಮರ ಬೀಳುವ ಶಬ್ದಕ್ಕೆ ಮನೆಯವರು ಹೊರ ಬಂದು ನೋಡಿದಾಗ ಕಾಡಾನೆಗಳ ಹಿಂಡು ಇರುವುದು ತಿಳಿದು ಬಂದಿದೆ. ಘಟನೆಯಿಂದಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ವೈರ್ ಕೆಳಗೆ ತುಂಡಾಗಿ ಬಿದ್ದಿದ್ದು, ಅದೃಷ್ಟವಶಾತ್ ಆನೆಗಳು ವಿದ್ಯುತ್ ಸ್ಪರ್ಶದಿಂದ ಬಚಾವಾಗಿವೆ.
ಆನೇಕಾಡು ಅರಣ್ಯ ಪ್ರದೇಶದಿಂದ ಬಂದು ಹಾರಂಗಿ ನದಿಯನ್ನು ದಾಟಿ ಹುದುಗೂರು ವ್ಯಾಪ್ತಿಗೆ ಕಾಡಾನೆಗಳು ಬಂದಿವೆ ಎನ್ನಲಾಗಿದೆ.