ಜಿಲ್ಲೆ

ಅಡಕೆ ಸೆಸ್, ಮಾರುಕಟ್ಟೆ ಶುಲ್ಕ ದರ ಇಳಿಕೆ ಸ್ವಾಗತಾರ್ಹ

ಸಿದ್ದಾಪುರ: ರಾಜ್ಯ ಸರ್ಕಾರ ನಮ್ಮ ಬೇಡಿಕೆಯನ್ನು ಮನ್ನಿಸಿ ಕ್ಯಾಬಿನೆಟ್​ನಲ್ಲಿ 1.50 ರೂ ಇರುವ ಮಾರುಕಟ್ಟೆ ಅಡಕೆ ಸೆಸ್ ಅನ್ನು 1ರೂ.ಗೆ ಇಳಿಸಿದ್ದರು. ಈಗ ಮರು ಪರಿಷ್ಕರಿಸಿ ಮಾರುಕಟ್ಟೆ ಶುಲ್ಕವನ್ನು 0.35ಪೈಸೆಗೆ ನಿಗದಿಪಡಿಸಿದ್ದನ್ನು ಸ್ವಾಗತಿಸುತ್ತೇವೆ ಎಂದು ಕರ್ನಾಟಕ ಅರೇಕಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯಿದೆಯಿಂದ ಮಾರುಕಟ್ಟೆ ಹೊರಗಡೆ ಖರೀದಿ ಮಾಡುವ ಅಡಕೆಗೆ ಯಾವುದೇ ಸೆಸ್ ಇರಲಿಲ್ಲ. ಆದರೆ, ಎಪಿಎಂಸಿ ಒಳಗೆ ಖರೀದಿಸುವ ಅಡಕೆಗೆ ಶೇ. 1 ತೆರಿಗೆ ವಿಧಿಸಲಾಗುತ್ತಿತ್ತು. ಇದನ್ನು ಸರಿಪಡಿಸಿಕೊಡುವವರೆಗೆ ಮಾರುಕಟ್ಟೆಯಲ್ಲಿ ನಡೆಯುವ ಟೆಂಡರ್ ಪ್ರಕ್ರಿಯೆಯಿಂದ ದೂರವಿರಲು ವರ್ತಕರು ನಿರ್ಧರಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎರಡು ಕಾನೂನುಗಳಿಂದ ಆಗುವ ದುಷ್ಪರಿಣಾಮಗಳನ್ನು ಶಿವಮೊಗ್ಗ ಅಡಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ. ಶಂಕರಪ್ಪ, ಮಾರ್ಗದರ್ಶಕ ಓಂಕಾರಪ್ಪ ಇತರರು ಹಾಗೂ ಅರೇಕಾ ಟಾಸ್ಕ್​ಫೋರ್ಸ್ ಅಧ್ಯಕ್ಷ ಶಾಸಕ ಅರಗ ಜ್ಞಾನೇಂದ್ರ, ಸಚಿವ ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಹಾಲಪ್ಪ, ಸಂಸದ ಜಿ.ಎಂ. ಸಿದ್ಧೇಶ್ವರ ಇವರು ಮನವರಿಕೆ ಮಾಡಿಕೊಟ್ಟಿದ್ದಲ್ಲದೆ ವಿಧಾನಸಭಾಧ್ಯಕ್ಷ , ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಕರ್ನಾಟಕ ಅರೇಕಾ ಚೇಂಬರ್ ಆಫ್ ಕಾಮರ್ಸ್​ನ ಕಾರ್ಯದರ್ಶಿ ರವಿ ಪಾಟೀಲ, ಕೋಶಾಧ್ಯಕ್ಷ ಲೋಕೇಶ ಹೆಗಡೆ, ಸಹಕಾರ್ಯದರ್ಶಿ ಎಂ.ಆರ್. ಹೆಗಡೆ, ಯಲ್ಲಾಪುರ ವರ್ತಕರ ಸಂಘದ ಪ್ರತಿನಿಧಿಗಳೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ನಮ್ಮ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಈಡೇರಿಸಿದ್ದಾರೆ. ಇದು ನಮ್ಮ ಸಾಂಘಿಕ ಪ್ರಯತ್ನಕ್ಕೆ ಸಂದ ಗೌರವವಾಗಿದೆ. ಎಲ್ಲ ಅಡಕೆ ವ್ಯಾಪಾರಿಗಳು ಪ್ರತಿಭಟನೆಯನ್ನು ಮುಕ್ತಾಯಗೊಳಿಸಿ ಟೆಂಡರ್​ನಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.</