ಶೃಂಗೇರಿ: ತಾಲೂಕಿನಲ್ಲಿ 11 ಶಾಖೆಗಳನ್ನು ಹೊಂದಿರುವ ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ ಕಳೆದ ಸಾಲಿನಲ್ಲಿ 3.91 ಕೋಟಿ ರೂ. ಲಾಭ ಗಳಿಸಿದೆ ಎಂದು ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಮ್ಯಾಮ್ಕೋಸ್ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, 1939ರಲ್ಲಿ ಸ್ಥಾಪಿತವಾದ ಸಂಸ್ಥೆ ಈಗ ವಿಸ್ತಾರವಾಗಿದೆ. ಪ್ರತಿ ವರ್ಷ ಲಾಭ ಗಳಿಸಿ ಅದನ್ನು ಷೇರುದಾರರಿಗೆ ಡಿವಿಡೆಂಡ್ ನೀಡುತ್ತ ಬಂದಿದೆ ಎಂದರು.
ಕಳೆದ ವರ್ಷದಿಂದ ವೈಯಕ್ತಿಕ ಆರೋಗ್ಯ ವಿಮೆ ಜಾರಿಗೊಳಿಸಿದ್ದು ಇದಲ್ಲದೆ ರೈತರು ಹಾಗೂ ಕಾರ್ವಿುಕರಿಗೆ ಗುಂಪು ವಿಮಾ ಸೌಲಭ್ಯದಡಿ ನೀಡಿದೆ. ಆಧುನಿಕ ತಂತ್ರಜ್ಞಾನ ಅಳವಡಿಕೆ ಭಾಗವಾಗಿ ಮ್ಯಾಮ್ಕೋಸ್ ಆಪ್ ಪರಿಚಯಿಸಲಾಗುತ್ತಿದ್ದು ರೈತರಿಗೆ ಹಲವು ರೀತಿಯಲ್ಲಿ ಉಪಯುಕ್ತವಾಗಲಿದೆ. ಸೆ.22 ರಂದು ಶಿವಮೊಗ್ಗದಲ್ಲಿನ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದ್ದು ಷೇರುದಾರರು ಸಭೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಮ್ಯಾಮ್ಕೋಸ್ ಶಾಖೆಯ ನೂತನ ಕಚೇರಿ ಉದ್ಘಾಟಿಸಲಾಯಿತು.