ಜಿಲ್ಲೆ

ಅಡಕೆ ಮಾರಾಟದ ವೇಳೆ ಇರಲಿ ಮುನ್ನೆಚ್ಚರಿಕೆ

ಚಿತ್ರದುರ್ಗ: ಅಡಕೆ ಕೊಯ್ಲು ಆರಂಭವಾಗಿದ್ದು, ಖೇಣಿ, ಹಸಿ ಅಥವಾ ಒಣ ಅಡಕೆ ಮಾರಾಟ ಸಂದರ್ಭದಲ್ಲಿ ಕಟ್ಟೆಚ್ಚರ ವಹಿಸುವಂತೆ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಬೆಳೆಗಾರರಿಗೆ ಮನವಿ ಮಾಡಿದ್ದಾರೆ.
ಈ ಹಿಂದಿನ ಕೆಲವು ವರ್ಷಗಳಲ್ಲಿ ಖೇಣಿ, ಮಾರಾಟ ವಹಿವಾಟು ವೇಳೆ ಹಲವು ವರ್ತಕರು ರೈತರಿಗೆ ಸರಿಯಾಗಿ ಮಾರಾಟ ಮೊತ್ತವನ್ನು ಪಾವತಿಸದೆ ಸತಾಯಿಸುತ್ತಿರುವುದು, ವಂಚಿಸುತ್ತಿರುವುದು ನಡೆದಿದೆ. ಈ ಕುರಿತಂತೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಆದ್ದರಿಂದ ಹಿಂದಿನ ಕಹಿ ಅನುಭವದ ಹಿನ್ನೆಲೆಯಲ್ಲಿ ಬೆಳೆಗಾರರು ಎಚ್ಚೆತ್ತುಕೊಳ್ಳ ಬೇಕು. ಅಡಕೆ ಮಾರಾಟ ಸಂದರ್ಭದಲ್ಲಿ ಮೊತ್ತವನ್ನು ಮೊದಲೇ ಪಡೆಯುವುದು ಉತ್ತಮ. ಕೇವಲ ನಂಬಿಕೆ, ಚೀಟಿ ಮೇಲೆ ವಹಿವಾಟು ನಡೆಸುವುದು ಸರಿಯಲ್ಲ.
ಈ ರೀತಿಯ ವಹಿವಾಟಿನಲ್ಲಿ ರೈತರಿಗೆ ಸೂಕ್ತ ರೀತಿಯಲ್ಲಿ ಹಣ ಸಂದಾಯವಾಗದಿರುವ ಸಾಧ್ಯತೆ ಅಧಿಕ ಹಾಗೂ ಕಾನೂನು ರಿತ್ಯಾ ವಸೂಲಿ ಕೂಡ ಅಸಾಧ್ಯವಾಗಬಹುದು. ಆದ್ದರಿಂದ ವರ್ತಕರು, ಖೇಣಿದಾರರಿಂದ ಪೂರ್ಣ ಪ್ರಮಾಣದಲ್ಲಿ ಹಣ ಪಡೆದು ಅಡಕೆ ಮಾರಾಟ ಮಾಡಬೇಕು ಅಥವಾ ಕಾನೂನು ಮಾನ್ಯತೆ ಪಡೆದಿರುವ ಚೆಕ್, ಪ್ರಾಮಿಸರಿನೋಟ್ ಅಥವಾ ಬಿಲ್ ಆಫ್ ಎಕ್ಸ್‌ಚೆಂಜ್‌ನಂಥ ಸೂಕ್ತ ಭದ್ರತೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಡಕೆ ಮಾರಾಟ ಸಮಯದಲ್ಲಿ ಅನುಸರಿಸುವಂತೆ ಎಸ್‌ಪಿ ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.