ಶಿರಸಿ: ಇಲ್ಲಿನ ಅಡಕೆ ವಹಿವಾಟು ಸಂಸ್ಥೆಯಾದ ಟಿಎಸ್ಎಸ್ನಲ್ಲಿ ಅಡಕೆ ನೇರ ಖರೀದಿಗೆ ಬೆಳೆಗಾರರಿಂದ ಉತ್ತಮ ಸ್ಪಂದನೆ ದೊರೆತಿದೆ.
ಖರೀದಿಯ ಆರಂಭದ ದಿನ 30 ಬೆಳೆಗಾರರಿಗೆ ಅವಕಾಶ ನೀಡಿದ್ದು, ಶುಕ್ರವಾರ 56 ರೈತರು ಅಡಕೆ ಮಾರಾಟ ಮಾಡಿದರು. ಹಣದ ತುರ್ತು ಇರುವ ಬೆಳೆಗಾರರು ಹೆಚ್ಚಾಗಿ ನೇರ ಖರೀದಿ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಪ್ರಯೋಜನ ಪಡೆದರು. ಹೊರ ಪ್ರದೇಶದ ವ್ಯಾಪಾರಿಗಳಿಗೆ ಈ ಸಂದರ್ಭದಲ್ಲಿ ಖರೀದಿಗೆ ಅವಕಾಶ ನೀಡಿದರೆ ದರ ಇಳಿಸುವ ಆತಂಕವಿರುವ ಕಾರಣ ಯಾವುದೇ ವ್ಯಾಪಾರಿಗೂ ಅವಕಾಶ ನೀಡದೆ ನೇರ ಖರೀದಿಗೆ ಸಂಸ್ಥೆ ಈ ಕ್ರಮ ಕೈಗೊಂಡಿದೆ. ದಿನದಿಂದ ದಿನಕ್ಕೆ ರೈತರ ಸಂಖ್ಯೆ ಹೆಚ್ಚಾಗುತ್ತಿದ್ದು, ವ್ಯಾಪಾರಕ್ಕೆ ಅವಕಾಶ ನೀಡಲು ಸಂಸ್ಥೆ ಮುಂದಾಗಿದೆ. ಜತೆ, ವ್ಯಾಪಾರಕ್ಕೆ ಹಾಕಿದ ಅಡಕೆಗೆ ದರ ಇಳಿಕೆ ಎಂದು ಕಂಡರೆ ಸಂಸ್ಥೆಯ ಗೋಡೌನ್ನಲ್ಲಿ ದಾಸ್ತಾನಿಡಲು ಕೂಡ ಅವಕಾಶ ನೀಡಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಅಡಕೆ ಬೆಳೆಗಾರರ ಹಿತ ಕಾಪಾಡಲು ಸಂಸ್ಥೆ ವತಿಯಿಂದ ನೇರ ಖರೀದಿ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. | ರವೀಶ ಹೆಗಡೆ- ಟಿಎಸ್ಎಸ್ ವ್ಯವಸ್ಥಾಪಕ ನಿರ್ದೇಶಕ