ಲಿಂಗದಹಳ್ಳಿ: ನಂದಿಬಟ್ಟಲು ಗ್ರಾಪಂನ ಸರ್ವೇ ನಂಬರ್ 108ರಲ್ಲಿ ಉಮ್ಲಾನಾಯ್ಕ ಎಂಬುವರ ತೋಟದಲ್ಲಿ ಅಡಕೆ, ತೆಂಗಿನ ಮರಗಳು, ತೋಟದ ನೀರಿನ ಪೈಪ್‌ಗಳನ್ನು ದಾಳಿಯಿಟ್ಟ ಒಂಬತ್ತು ಕಾಡಾನೆಗಳು ಧ್ವಂಸಗೊಳಿಸಿವೆ.
45-50 ಅಡಕೆ ಮರಗಳು, ತೆಂಗಿನ ಮರಗಳು ಮತ್ತು ನೀರಿನ ಪೈಪ್‌ಗಳನ್ನು ಕಾಡಾನೆಗಳು ನಾಶಪಡಿಸಿವೆ. ಅಡಕೆ ಫಸಲನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬ ಕಂಗಾಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ನಂದಿಬಟ್ಟಲು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಪಿ.ಕೃಷ್ಣೇಗೌಡ ಮನವಿ ಮಾಡಿದ್ದಾರೆ.
ಭದ್ರಾ ಅಭಯಾರಣ್ಯದ ಸುತ್ತ ನಿರ್ಮಿಸಿರುವ ಆನೆ ನಿರೋಧಕ ಕಂದಕದ ಕೆಲ ಭಾಗಗಳು ಮುಚ್ಚಿಹೋಗಿದ್ದು, ಅಂತಹ ಸ್ಥಳಗಳ ಮೂಲಕ ಕಾಡಾನೆಗಳು ಜಮೀನುಗಳತ್ತ ನುಗ್ಗುತ್ತಿವೆ. ಅರಣ್ಯಾಧಿಕಾರಿಗಳು ಆನೆ ನಿರೋಧಕ ಕಂದಕ ದುರಸ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ತಣಿಗೆಬೈಲು ಭದ್ರಾ ವನ್ಯಜೀವಿ ವಲಯ ಅರಣ್ಯಾಧಿಕಾರಿ ಸುಧಾಕರ್ ಪ್ರತಿಕ್ರಿಯಿಸಿದ್ದು, ನಂದಿಬಟ್ಟಲು ಗ್ರಾಮದ ಬಳಿ ಆನೆ ನಿರೋಧಕ ಕಂದಕದಲ್ಲಿರುವ ಮಣ್ಣು ತೆರವುಗೊಳಿಸಲಾಗಿದೆ. ಸಂತ್ರಸ್ತ ರೈತರ ಜಮೀನಿನ ಪರಿಶೀಲನೆ ಮಾಡಿ ಬೆಳೆ ನಷ್ಟಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.