ಜಿಲ್ಲೆ

ಅಡಕೆ ಕೃಷಿಯಲ್ಲಿ ಸಹೋದರರ ಕಮಾಲ್

ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ತಾಲೂಕಿನ ತೆರಕಣಾಂಬಿಹುಂಡಿ ಗ್ರಾಮದ ಸಹೋದರರಿಬ್ಬರು ಕೈತುಂಬ ಸಂಬಳ ಬರುತ್ತಿದ್ದ ಉದ್ಯೋಗವನ್ನು ತೊರೆದು ಸಾವಯವ ಪದ್ಧತಿಯಲ್ಲಿ ಅಡಕೆ ಬೆಳೆದು ಉತ್ತಮ ಲಾಭ ಗಳಿಸುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ….!

ಗ್ರಾಮದ ಪ್ರಗತಿಪರ ರೈತ ಗಣೇಶಪ್ಪ ಎಂಬುವರ ಪುತ್ರರಾದ ಜಿ.ಶಿವಪ್ರಕಾಶ್ ಹಾಗೂ ಚಂದ್ರಶೇಖರ್ ಎಂಬ ಸಹೋದರರೇ ಅಡಕೆ ಕೃಷಿಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಎಂಬಿಎ ಪದವಿ ಪಡೆದು ಬೆಂಗಳೂರಿನಲ್ಲಿ ನಾನಾ ಕಂಪನಿಗಳಲ್ಲಿ ಉದ್ಯೋಗ ಮಾಡಿದ ಅನುಭವವಿರುವ ಜಿ.ಶಿವಪ್ರಕಾಶ್ ಹಾಗೂ ಬಿಬಿಎಂ ಪದವಿ ಪಡೆದು ನಾನಾ ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿದ್ದ ಚಂದ್ರಶೇಖರ್ ತಂದೆಗೆ ನೆರವಾಗುವ ಸಲುವಾಗಿ ಕೈತುಂಬ ಸಂಬಳ ಬರುತ್ತಿದ್ದ ಉದ್ಯೋಗಗಳನ್ನು ಬಿಟ್ಟು ಊರಿಗೆ ಬಂದು ಕಳೆದ ಐದಾರು ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಯಾವುದೇ ಬೆಳೆಯಾದರೂ ಸರಿ, ಹೆಚ್ಚು ಇಳುವರಿ ಬಂದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ. ಕಡಿಮೆ ಬೆಳೆದರೆ ಹೆಚ್ಚಿನ ಬೆಲೆ ಸಿಕ್ಕರೂ ಇಳುವರಿ ಸಿಗದೆ ನಷ್ಟ ಅನುಭವಿಸಬೇಕು. ಇದನ್ನು ಅರಿತ ಸಹೋದರರು ಅಡಕೆ ಬೆಳೆ ಬೆಳೆಯಲು ತೀರ್ಮಾನಿಸಿದರು. 30 ವರ್ಷಗಳ ಹಿಂದಿನಿಂದಲೂ ತಂದೆ ಅನುಸರಿಸಿಕೊಂಡು ಬಂದಿದ್ದ ಅಡಕೆ ಕೃಷಿಯನ್ನು ಕೈಗೊಳ್ಳಲು ಮುಂದಾದರು. ಚಂದಕವಾಡಿಯ ನಾಗರಾಜಪ್ಪ ಎಂಬುವರ ತೋಟದಲ್ಲಿ ಬೆಳೆದಿರುವ 40 ವರ್ಷ ಮೇಲ್ಪಟ್ಟ ವಯಸ್ಸಿನ ಮರದ ಕಾಯಿಗಳಿಂದ ಬೆಳೆಸಿದ ಸಸಿಗಳನ್ನು ತಂದು ತಮ್ಮ 6 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದರು. ಸಾವಯವ ಪದ್ಧತಿಯಲ್ಲಿ ಅಡಕೆ ಕೃಷಿ ಮಾಡಿರುವ ಸಹೋದರರು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ. ಗಿಡಗಳು ಚೆನ್ನಾಗಿ ಬೆಳೆದಿದ್ದು, ಉತ್ತಮ ಫಸಲು ಕೊಡುತ್ತಿವೆ.
ಸದ್ಯ ವಾರ್ಷಿಕ 60-80 ಕ್ವಿಂಟಾಲ್ ಹಸಿ ಅಡಕೆ ಬೆಳೆಯುತ್ತಿರುವ ಸಹೋದರರು, ಮುಂದಿನ ದಿನಗಳಲ್ಲಿ 100 ರಿಂದ 110 ಕ್ವಿಂಟಾಲ್‌ವರೆಗೆ ಇಳುವರಿ ದೊರಕುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ವಿದೇಶಗಳಿಂದ ಅಡಕೆ ಆಮದು ನಿರ್ಬಂಧಿಸಿ ಶ್ರೀಲಂಕಾ, ಮಲೇಷ್ಯಾ ದೇಶಗಳಿಂದ ಕಳ್ಳ ಮಾರ್ಗದಲ್ಲಿ ಬರುತ್ತಿದ್ದ ಕಳಪೆ ಅಡಕೆಯನ್ನು ತಡೆಗಟ್ಟಿರುವುದರಿಂದ ಬೇಯಿಸಿದ ಅಡಕೆಗೆ ಕ್ವಿಂಟಾಲ್‌ಗೆ 50 ರಿಂದ 60 ಸಾವಿರ ರೂ. ಬೆಲೆ ಸಿಗುತ್ತಿದೆ. ಹೀಗಾಗಿ ಸಹೋದರರು ಲಾಭದ ಕನಸು ಕಾಣುತ್ತಿದ್ದಾರೆ.

ಬ್ರಷ್ ಕಟರ್‌ನಲ್ಲಿ ಕಳೆಗಳನ್ನು ಕತ್ತರಿಸುವುದು, ವರ್ಷಕ್ಕೆ ಒಮ್ಮೆ ಮಾತ್ರ ರೊಟಾವೇಟರ್ ಮೂಲಕ ಉಳುಮೆ ಮಾಡುವುದು ಹಾಗೂ ಡ್ರಿಪ್ ಪೈಪ್‌ನಲ್ಲಿ ಗಿಡಗಳಿಗೆ ನೀರು ಹೋಗುತ್ತಿರುವುದನ್ನು ಖಚಿತ ಪಡಿಸಿಕೊಳ್ಳುವುದು ಬಿಟ್ಟರೆ ಉಳಿದ ಯಾವುದೇ ವೆಚ್ಚವನ್ನೂ ಮಾಡದೆ ಅಡಕೆ ತೋಟವನ್ನು ಸಹೋದರರು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ.

ಯೋಜನೆ ಇಲ್ಲದೆ ವ್ಯವಸಾಯ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ. 5 ಎಕರೆ ಒಳಗಿನ ಸಣ್ಣ ಹಿಡುವಳಿದಾರರು ತಾವೇ ಹೆಚ್ಚಿನ ಸಮಯ ಕೃಷಿಯಲ್ಲಿ ತೊಡಗಿಸಿಕೊಂಡರೆ ತರಕಾರಿ, ಉಪಬೆಳೆಗಳಲ್ಲಿ ಹೆಚ್ಚಿನ ಲಾಭ ಕಾಣಬಹುದು. ದೊಡ್ಡ ಹಿಡುವಳಿದಾರರಿಗೆ ಕಾರ್ಮಿಕರ ಕೊರತೆಯಾಗುವುದರಿಂದ ತೋಟಗಾರಿಕೆ ಬೆಳೆ ಉತ್ತಮ.

ಶಿವಪ್ರಕಾಶ್, ತೆರಕಣಾಂಬುಹುಂಡಿ.