ಭದ್ರಾವತಿ ಗೌರಾಪುರ ಗ್ರಾಮದ ಬಳಿ ಭತ್ತ ಸಸಿಮಡಿ ಮಾಡಲು ಸಿದ್ಧತೆ ನಡೆಸುತ್ತಿರುವುದು. 
ಜಿಲ್ಲೆ

ಅಡಕತ್ತರಿಯಲ್ಲಿ ಭದ್ರಾ ಅಚ್ಚುಕಟ್ಟುದಾರರು

ಬಸವರಾಜ್ ಭದ್ರಾವತಿ

ಭದ್ರಾವತಿ ತಾಲೂಕಿನೆಲ್ಲೆಡೆ ಮುಂಗಾರು ಮಳೆ ಉತ್ತಮವಾಗಿದೆ. ರೈತರ ಜೀವನಾಡಿ ಭದ್ರಾ ಜಲಾಶಯ ಭರ್ತಿಯಾಗಲು ಕೆಲವೇ ಅಡಿಗಳಷ್ಟು ಬಾಕಿ ಇದೆ. ಆದರೆ ಭದ್ರಾ ಬಲ ಹಾಗೂ ಎಡದಂಡೆ ನಾಲೆಗಳಲ್ಲಿ ನಡೆಯುತ್ತಿರುವ ಕಾಮಗಾರಿ ವಿಳಂಬದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುವುದರಿಂದ ಭತ್ತದ ಬೆಳೆಗಾರರು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 170.9 ಅಡಿಗೆ ಏರಿಕೆಯಾಗಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಲು (ಗರಿಷ್ಠ 186 ಅಡಿ) ಇನ್ನು ಕೆಲವೇ ಅಡಿಗಳು ಬಾಕಿ ಇದೆ. ಜೂನ್ ಅಂತ್ಯಕ್ಕೆ 107 ಮಿಮೀ ವಾಡಿಕೆ ಮಳೆಯಾಗುತ್ತಿತ್ತು. ಆದರೆ ಈ ಬಾರಿ 122.8ರಷ್ಟು ಮಳೆಯಾಗಿದೆ. ಶೇ.23ರಷ್ಟು ಹೆಚ್ಚು ಮಳೆ ದಾಖಲಾಗಿದೆ. ಇದೆ ರೀತಿ ನಿರಂತರ ಮಳೆ ಸುರಿಯುತ್ತಿದ್ದರೆ ಜಲಾಶಯ ಪ್ರತಿ ವರ್ಷಕ್ಕಿಂತ ಈ ಬಾರಿ ಬೇಗ ಭರ್ತಿಯಾಗಲಿದೆ.

ನೀರಿನ ಲಭ್ಯತೆ ನೋಡಿಕೊಂಡು ಭತ್ತ ಬೆಳೆಯಲು ಮುಂದಾಗಿ ಎಂದು ಕೃಷಿ ಇಲಾಖೆ ಅಕಾರಿಗಳು ಈಗಾಗಲೇ ಸೂಚಿಸಿದ್ದಾರೆ. ತಾಲೂಕಿನ ರೈತರು ಅಗತ್ಯತೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಕಳೆದ ವರ್ಷ ತಾಲೂಕಿನ 31,617 ಹೆಕ್ಟೇರ್ ಭೂಮಿಯಲ್ಲಿ 27,525 ಹೆ.ನಲ್ಲಿ ಪ್ರಮುಖ ತೋಟಗಾರಿಕಾ ಬೆಳೆಗಳಾದ ಅಡಕೆ, ತೆಂಗು, ಬಾಳೆ ಬೆಳೆಯಲಾಗಿತ್ತು. ಹಿಂಗಾರು ಹಂಗಾಮಿನಲ್ಲಿ 3,575 ಹೆ.ನಲ್ಲಿ ಭತ್ತ, 500 ಹೆ. ಮೆಕ್ಕೆಜೋಳ, 30 ಹೆ. ರಾಗಿ, 10 ಹೆ. ಭೂಮಿಯಲ್ಲಿ ಅಲಸಂದೆ ಬೆಳೆಯಲಾಗಿತ್ತು. ಇದೀಗ ಮುಂಗಾರಿನಲ್ಲಿ 6,000 ಹೆ. ಭತ್ತ, 700 ಹೆ. ಮೆಕ್ಕೆಜೋಳ, 100 ಹೆ. ರಾಗಿ ಹಾಗೂ 40 ಹೆ. ಅಲಸಂದೆ ಬೆಳೆಯುವ ಗುರಿ ಹೊಂದಲಾಗಿದೆ.

ಬಿತ್ತನೆ ಬೀಜ ಸಂಗ್ರಹ

ಮುಂಗಾರು ಹಂಗಾಮಿಗೆ ಬೇಡಿಕೆ ಇರುವಷ್ಟು ಬಿತ್ತನೆಬೀಜ, ರಸಗೊಬ್ಬರವನ್ನು ಕೃಷಿ ಇಲಾಖೆಯು ಭದ್ರಾವತಿ, ಹೊಳೆಹೊನ್ನೂರು, ಆನವೇರಿ, ಹಿರಿಯೂರು ಸೇರಿ ತಾಲೂಕಿನ 6 ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿದೆ. 280 ಕ್ವಿಂಟಾಲ್ ಸಹ್ಯಾದ್ರಿ ಕೆಂಪುಮುಕ್ತಿ, ಜ್ಯೋತಿ ಹಾಗೂ ಆರ್‌ಎನ್‌ಆರ್-15046 ಹೈಬ್ರೀಡ್ ಭತ್ತದ ತಳಿ ಸಂಗ್ರಹಿಸಿಟ್ಟಿದೆ. 500 ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ ನಿರೀಕ್ಷೆ ಇದೆ. 8 ಕ್ವಿಂಟಾಲ್ ರಾಗಿ, 60 ಕ್ವಿಂಟಾಲ್ ಮೆಕ್ಕೆಜೋಳ, 20 ಕ್ವಿಂಟಾಲ್ ಅಲಸಂದೆ ಬಿತ್ತನೆ ಬೀಜ ದಾಸ್ತಾನಿದೆ. ತೊಗರಿಗೆ 5 ಕ್ವಿಂಟಾಲ್ ಬೇಡಿಕೆ ಇದೆ. ಈಗಾಗಲೆ 3.5 ಕ್ವಿಂಟಾಲ್‌ನಷ್ಟು ರೈತರು ಖರೀದಿಸಿದ್ದಾರೆ.

ರಸಗೊಬ್ಬರ ದಾಸ್ತಾನು

ಡಿಎಪಿ-145, ಎಂಒಪಿ-185 , ಯೂರಿಯಾ- 1000, ಎನ್‌ಪಿಕೆ - 1190, ಎಸ್‌ಎಸ್‌ಪಿ-98, ಮೆಟ್ರಿಕ್ ಟನ್ ಸೇರಿ ಒಟ್ಟು 2580 ಮೆಟ್ರಿಕ್ ಟನ್ ಗೊಬ್ಬರಕ್ಕೆ ಬೇಡಿಕೆ ಇದೆ. 2635 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆ ಇಲ್ಲ.

ಕಣ್ಮರೆಯಾದ ಕಬ್ಬು

ಕೃಷಿ ಬೆಳೆಯಾದ ಭತ್ತ, ತೋಟದ ಬೆಳೆಯಾದ ಅಡಕೆಗೂ ಸವಾಲೆಸೆಯುವಂತೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದ ಕಬ್ಬು ಬೆಳೆಗಳ ಪಟ್ಟಿಯಿಂದಲೇ ಮಾಯವಾಗಿದೆ. ಎಂಪಿಎಂ ಕಾರ್ಖಾನೆ ಮುಚ್ಚಿದ ಕೂಡಲೇ ಪ್ರತಿವರ್ಷ ಬೆಳೆ ಪ್ರದೇಶ ಕಡಿಮೆಯಾಗಿ ಇಂದು ಕಣ್ಮರೆಯಾಗಿದೆ. ಕಬ್ಬು ಬೆಳೆಯುವ ಪ್ರದೇಶ ಅಡಕೆ ತೋಟವಾಗಿ ಪರಿವರ್ತನೆಯಾಗಿದೆ.

ಭತ್ತ ಬೆಳೆಗಾರರಿಗೆ ಸಂಕಷ್ಟ

ಭದ್ರಾ ಜಲಾಶಯದ ಬಲ ಹಾಗೂ ಎಡದಂಡೆ ನಾಲೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಬಲದಂಡೆಯನ್ನು ಸೀಳಿ ಜೆಜೆಎಂ ಕಾಮಗಾರಿ ನಡೆಸುತ್ತಿದ್ದರೆ, ಎಡದಂಡೆಯಲ್ಲಿ ನೀರು ಸೋರಿಕೆ ತಡೆಗೆ ಗೇಟ್ ಅಳವಡಿಕೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಹಾಗಾಗಿ 45 ದಿನಗಳ ಕಾಲ ಎಡದಂಡೆಯಲ್ಲಿ ನೀರು ಹರಿಸುವುದಿಲ್ಲ ಎಂದು ಅಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಭತ್ತದ ಬದಲಾಗಿ ದ್ವಿದಳ ಧಾನ್ಯಗಳನ್ನು ಬೆಳೆಯಲು ಕೃಷಿ ಇಲಾಖೆ ಶಿಾರಸು ಮಾಡುತ್ತಿದೆ. ಆದರೆ ಕೆಲ ರೈತರು ಭತ್ತದ ಸಸಿಮಡಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯಲು 3 ತಿಂಗಳು ಬೇಕು. ಇದರಲ್ಲಿ 45 ದಿನಗಳ ಕಾಲ ನೀರಿನ ಲಭ್ಯತೆ ಇರಲ್ಲ. ಹಾಗಾಗಿ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯಬೇಕೋ, ಬೇಡವೋ ಎಂಬ ಚಿಂತೆ ಕಾಡುತ್ತಿದೆ. ಇನ್ನೊಂದೆಡೆ ಭತ್ತದ ಗದ್ದೆಯಲ್ಲಿ ದ್ವಿದಳ ಧಾನ್ಯ ಬೆಳೆಯಲು ಸಾಧ್ಯವೇ ಇಲ್ಲ. ತೇವಾಂಶ ಒಣಗಲು 10 ದಿನವಾದರೂ ಬೇಕು. ಅಷ್ಟರಲ್ಲಿ ದ್ವಿದಳ ಧಾನ್ಯದ ಬೀಜ ಕೊಳೆತು ಹೋಗುತ್ತದೆ. ಭತ್ತ ನಾಟಿ ಮಾಡಿದರೆ ಆರಂಭದ 25 ದಿನಗಳವರೆಗೂ ಗದ್ದೆಯಲ್ಲಿ ನೀರು ಇರಲೇ ಬೇಕು. ಆ ಸಮಯದಲ್ಲಿ ಮಳೆ ಕೈಕೊಟ್ಟರೆ ಗತಿಯೇನು? ಶೇ.80ರಷ್ಟು ರೈತರು ಭತ್ತ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಬಂಡಾರಹಳ್ಳಿಯ ಪ್ರಗತಿಪರ ರೈತ ಹೇಮಂತ್, ಬಿ.ಟಿ.ಶ್ರೀಧರ್.

ಜಾಹಿರಾತು ನಂಬಬೇಡಿ

ಜೈವಿಕ ಗೊಬ್ಬರ ಮಾರಾಟದ ನಾನಾ ಕಂಪನಿಗಳು ಹುಟ್ಟಿಕೊಂಡಿವೆ. ಖರೀದಿಸಿದ ಗೊಬ್ಬರವನ್ನು ಶಿವಮೊಗ್ಗ ಜೈವಿಕ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಿ ಸೂಕ್ತ ಪೋಷಕಾಂಶ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡು ಬಳಸಿ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳನ್ನು ನಂಬಬೇಡಿ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ರಾಮಕೃಷ್ಣಪ್ಪ ಎಚ್ಚರಿಸಿದ್ದಾರೆ. ಅಡಕೆ ತೋಟಗಳಿಗೆ ಕೊಳೆ ಹಾಗೂ ಎಲೆಚುಕ್ಕೆ ರೋಗ ಬಾಸುವ ಸಾಧ್ಯತೆ ಇದೆ. ಬೋರ್ಡೋ ದ್ರಾವಣ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಭದ್ರಾ ನದಿ ಎಡ ಹಾಗೂ ಬಲದಂಡೆ ನಾಲಾ ರೈತರು ನೀರಿನ ಲಭ್ಯತೆಗೆ ಅನುಗುಣವಾಗಿ ಭತ್ತ ಬೆಳೆಯಲು ಮುಂದಾಗಬೇಕು. ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸಮರ್ಪಕವಾಗಿ ಬಳಸಬೇಕು. ಈ ಬಾರಿ ಸಹ್ಯಾದ್ರಿ ಅನ್ನಪೂರ್ಣ ತಳಿಯನ್ನು ಪರಿಚಯಿಸಲಾಗುತ್ತಿದೆ. ರೈತರು ಇ-ಕೆವೈಸಿ ಮಾಡಿಸಲು ಇಲಾಖೆಯೊಂದಿಗೆ ಸಹಕರಿಸಬೇಕು.

ದೇವೇಂದ್ರಪ್ಪ ಕಡ್ಲೇರ

ಸಹಾಯಕ ಕೃಷಿ ನಿರ್ದೇಶಕ

ಮಳೆಗಾಲದಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಂಡುಬರುವುದಿಲ್ಲ. ಹಳ್ಳಗಳ ನೀರು ಸಹ ನಮಗೆ ಉಪಯುಕ್ತವಾಗುತ್ತದೆ. ನಮ್ಮದು ಎಡದಂಡೆ ನಾಲೆಯಾಗಿದ್ದು ರೀಪೇರಿ ಕಾಮಗಾರಿ ಇನ್ನೆರಡು ದಿನಗಳಲ್ಲಿ ಮುಗಿದು ನಾಲೆಯಲ್ಲಿ ನೀರು ಹರಿಯಲಿದೆ. 4 ತಿಂಗಳವರೆಗೆ ಮಳೆಗಾಲ ಇರುವುದರಿಂದ ಭತ್ತಕ್ಕೆ ಸಮಸ್ಯೆ ಆಗುವುದಿಲ್ಲ.

ಸುಂದರ್‌ರಾಜ್

ರೈತ, ಸುಣ್ಣದಹಳ್ಳಿ