ಜಿಲ್ಲೆ

ಅಜ್ಞಾನದ ವಿಮೋಚನೆ ಮಾಡಲಿದೆ ಶಿಕ್ಷಣ

ಮೈಸೂರು: ಎನ್‌ಆರ್ ಸಮೂಹ ಸಂಸ್ಥೆಯ ಒಡೆತನದ ಮೈಸೂರು ವಾರಿಯರ್ಸ್ ವತಿಯಿಂದ ಜೆಸಿ ನಗರದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನಿರ್ಮಿಸಿರುವ ವಿನೂತನ ಗ್ರಂಥಾಲಯ, ಕ್ರೀಡಾ ಕೊಠಡಿಯನ್ನು ಗುರುವಾರ ಉದ್ಘಾಟಿಸಲಾಯಿತು.


ರಿಫಾರೆಸ್ಟ್ ಇಂಡಿಯಾ, ಕಲಿಸು ಫೌಂಡೇಷನ್, ಉಷಾ ಕಿರಣ್ ಐ ಹಾಸ್ಟಿಟಲ್ ಮತ್ತು ಡಾಯ್ಚ ಕ್ಲೆಪ್ಟ್ ಕಿಂಡರಲ್ ಲೈಫ್ ಸಂಸ್ಥೆಯೊಂದಿಗೆ ಈ ಉಪಕ್ರಮ ಕೈಗೊಳ್ಳಲಾಗಿದೆ.


ಕರ್ನಾಟಕ ಪ್ರೀಮಿಯರ್ ಲೀಗ್‌ನ ಮೈಸೂರು ವಾರಿಯರ್ಸ್ ಕ್ರಿಕೆಟ್ ತಂಡದ ಮಾಲೀಕ ಅರ್ಜುನ ರಂಗ, ನಾಯಕ ಕರುಣ್ ನಾಯರ್, ತಂಡದ ಸದಸ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮಕ್ಕಳೊಂದಿಗೆ ಟೇಬಲ್ ಟೆನಿಸ್ ಆಡುವ ಮೂಲಕ ಕರುಣ್ ನಾಯಕ್ ಖುಷಿಪಟ್ಟರು. ಬಳಿಕ ಮಾತನಾಡಿದ ಅವರು, ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಶಿಕ್ಷಣದ ಜತೆಗೆ ಕ್ರೀಡೆಯೂ ಅಗತ್ಯ. ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಶೈಕ್ಷಣಿಕ ಕಲಿಕೆಯೊಂದಿಗೆ ಕ್ರೀಡಾ ಚಟುವಟಿಕೆಗೂ ಉತ್ತೇಜನ ನೀಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶಿಕ್ಷಕರ ಮಾತುಗಳನ್ನು ಮಕ್ಕಳು ಆಲಿಸಬೇಕು. ನಿಮ್ಮ ಭವಿಷ್ಯದ ಒಳಿತಿಗಾಗಿ ಶ್ರಮಿಸುವ ಪ್ರತಿಯೊಬ್ಬರನ್ನೂ ಗೌರವದಿಂದ ಕಾಣಬೇಕು. ಓದಿನ ಜತೆಗೆ ಕ್ರೀಡೆಯಲ್ಲೂ ಆಸಕ್ತಿ ಬೆಳಸಿಕೊಂಡು ಕನಸು ಸಾಕಾರಗೊಳಿಸಿಕೊಳ್ಳಲು ಶ್ರಮವಹಿಸಬೇಕು ಎಂದು ಕಿವಿಮಾತು ಹೇಳಿದರು.


ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತನಾಡಿ, ಶಿಕ್ಷಣ ಎಂಬುದು ಪ್ರತಿಯೊಬ್ಬರ ಅಜ್ಞಾನದ ವಿಮೋಚನೆಯಾಗಿದೆ. ಅದರಿಂದ ಮಾತ್ರ ಮನುಷ್ಯ ಪರಿಪೂರ್ಣ ವ್ಯಕ್ತಿತ್ವ ಮೈಗೂಡಿಸಿಕೊಳ್ಳಲು ಸಾಧ್ಯ. ಆದ್ದರಿಂದ ಮಕ್ಕಳು ನಿಮಗೆ ಸಿಗುವ ಎಲ್ಲ ಅವಕಾಶವನ್ನೂ ಸೂಕ್ತ ರೀತಿಯಲ್ಲಿ ಬಳಸಿಕೊಂಡು ಗುರಿಯತ್ತ ಮುನ್ನುಗ್ಗಬೇಕು ಎಂದು ಹೇಳಿದರು.


ಸಹಪಾಠಿಗಳೊಂದಿಗೆ ಬೆರೆಯಬೇಕು. ಉತ್ತಮ ಸ್ನೇಹಿತರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ಅವರು ನಿಮ್ಮ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಬೋಧನೆ ಮಾಡುವ ಪ್ರತಿಯೊಬ್ಬ ಶಿಕ್ಷಕರೊಂದಿಗೆ ಆತ್ಮೀಯತೆ ಮತ್ತು ಗೌರವದಿಂದ ನಡೆದುಕೊಳ್ಳಬೇಕು. ಅವರು ಹೇಳುವ ಕೆಲಸವನ್ನು ತಪ್ಪದೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಕಲಿಸು ಫೌಂಡೇಷನ್ ಸಂಸ್ಥೆಯ ಸಿಇಒ ಎಂ.ಎಂ.ನಿಖಿಲೇಶ್ ಮಾತನಾಡಿ, ಆದರ್ಶ ಶಾಲೆಗೆ ಕಲಿಸು ಸಂಸ್ಥೆಯು 8 ವರ್ಷಗಳಿಂದಲೂ ಬೆನ್ನೆಲುಬಾಗಿ ನಿಂತಿದೆ. ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯೊಂದಿಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬೇಕಾದ ಅಗತ್ಯ ಸಹಾಯ ನೀಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ಗ್ರಂಥಾಲಯ ಮತ್ತು ಕ್ರೀಡಾ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜತೆಗೆ ಕ್ರೀಡೆಯೂ ಅವಶ್ಯಕ ಎಂದು ಹೇಳಿದರು.


2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಅಂಕ ಗಳಿದ ಎಕ್ತಾ ಹಾಗೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದ ಪುಣ್ಯ ಅವರಿಗೆ ನಗದು ಬಹುಮಾನ ನೀಡಲಾಯಿತು.


ಮೈಸೂರು ದಕ್ಷಿಣ ವಲಯ ಬಿಇಒ ರಾಜು, ಸಮನ್ವಯಾಧಿಕಾರಿ ಶ್ರೀಕಂಠಸ್ವಾಮಿ, ಶಾಲಾ ಮುಖ್ಯೋಪಾಧ್ಯಾಯ ಬೋರ್‌ರಾಜು, ಹಾಗೂ ಮೈಸೂರು ವಾರಿಯರ್ಸ್‌ ತಂಡದ ಆಟಗಾರರು ಇದ್ದರು.