ಕೆ.ಆರ್.ಪೇಟೆ ತಾಲೂಕು ಕತ್ತರಘಟ್ಟ ಗ್ರಾಮಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಶಾಸಕರಾದ ಎಚ್.ಟಿ.ಮಂಜು, ಸುರೇಶ್‌ಬಾಬು, ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ ಇತರರಿದ್ದರು. 
ಜಿಲ್ಲೆ

ಅಜ್ಜಿ, ಮೊಮ್ಮಗನ ಮೃತದೇಹ ತರಲು ಕ್ರಮ

ಕೆ.ಆರ್.ಪೇಟೆ: ಕೇರಳದ ವಯನಾಡಿನಲ್ಲಿ ಭೂಕುಸಿತದಲ್ಲಿ ಮೃತಪಟ್ಟಿರುವ ತಾಲೂಕಿನ ಕತ್ತರಘಟ್ಟ ಗ್ರಾಮದ ಲೀಲಾವತಿ ಮತ್ತು ನಿಹಾಲ್ ಮೃತದೇಹವನ್ನು ತರಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ಗುಡ್ಡ ಕುಸಿತದ ನಡುವೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಮೃತದೇಹ ಹಾಗೂ ಚಿಕಿತ್ಸೆ ಪಡೆಯುತ್ತಿರುವವರನ್ನು ಕರ್ನಾಟಕಕ್ಕೆ ಕರೆತರುವಂತೆ ಕುಟುಂಬಸ್ಥರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಯನಾಡಿನಲ್ಲಿರುವ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಸಮನ್ವಯ ಸಾಧಿಸಿದೆ.

ಗುರುವಾರ ಕತ್ತರಘಟ್ಟ ಗ್ರಾಮಕ್ಕೆ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 70 ಸಾವಿರ ರೂ. ಧನಸಹಾಯ ಮಾಡಿ ಧೈರ್ಯ ತುಂಬಿದರು. ಈ ವೇಳೆ ಸಂಬಂಧಿಕರನ್ನು ಕಳೆದುಕೊಂಡು ಕಣ್ಣೀರಾಕುತ್ತಿದ್ದ ದೃಶ್ಯವನ್ನು ಕಂಡು ಭಾವುಕರಾದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ಕೇರಳದಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತವಾಗಿದೆ. 2 ದಿನದಿಂದ ಕಾರ್ಯಾಚರಣೆ ನಡೆಯುತ್ತಲೇ ಇದೆ. 271 ಜನರು ಮೃತಪಟ್ಟಿರುವ ಮಾಹಿತಿ ಇದೆ. ಕತ್ತರಘಟ್ಟದ ಲೀಲಾವತಿ ಹಾಗೂ ನಿಹಾಲ್ ಮೃತಪಟ್ಟಿದ್ದಾರೆ. ಇನ್ನೂ ಇದೇ ಕುಟುಂಬದ ಮೂವರು ಕೇರಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 40 ವರ್ಷದಿಂದ ಕೇರಳದಲ್ಲಿ ಈ ಕುಟುಂಬ ನೆಲೆಸಿತ್ತು. ಅವರ ಹೊಸಮನೆಯ ಗೃಹಪ್ರವೇಶ ಆ.6ರಂದು ಆಗಬೇಕಿತ್ತು. ಆದರೆ ಭಗವಂತನ ಆಟಕ್ಕೆ ಬಹಳಷ್ಟು ಜನ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಹಿತಿ ಪಡೆದಿದ್ದಾರೆ. ಬಹಳಷ್ಟು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮವರ ಮೃತದೇಹ ಕೊಡಿಸಿ. ಅವರ ಮುಖವನ್ನಾದರೂ ನೋಡುತ್ತೇವೆ. ಅಂತ್ಯಕ್ರಿಯೆ ಮಾಡುವ ಅವಕಾಶ ಕಲ್ಪಿಸಿ ಕೊಡಿ ಎನ್ನುತ್ತಿದ್ದಾರೆ. ನಾವು ಸಹ ಈ ಬಗ್ಗೆ ಮುತುವರ್ಜಿ ವಹಿಸುತ್ತೇವೆ ಎಂದರು.

ರಾಜ್ಯದಲ್ಲಿಯೂ ಹೈಅಲರ್ಟ್ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಒಂದು ವಾರಗಳ ಕಾಲ ರೆಡ್ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ. ಕೇರಳದಂತೆ ಆಗಬಹುದು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ರಾಜ್ಯದ 10-12 ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ. ಜಾನುವಾರು ಹಾನಿಯಾಗದಂತೆ ರಾಜ್ಯ ಸರ್ಕಾರ ಎಚ್ಚರವಹಿಸಲಿ ಎಂದು ಆಗ್ರಹಿಸಿದರು.

ಪಾದಯಾತ್ರೆ ಸಂಬಂಧ ಚರ್ಚೆ: ಮೈಸೂರಿನ ಮುಡಾ ಹಗರಣ ಸಂಬಂಧ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್‌ಕುಮಾರಸ್ವಾಮಿ, ಕೋರ್‌ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಎಲ್ಲರೂ ಪಾದಯಾತ್ರೆ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ತಿಳಿಸಿದ್ದಾರೆ. ಹವಾಮಾನ ಇಲಾಖೆ ಭಾರಿ ಮಳೆಯಾಗುವ ಬಗ್ಗೆ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ. ಇದನ್ನೆಲ್ಲ ಮುಂದಿಟ್ಟುಕೊಂಡು ಪಾದಯಾತ್ರೆ ಬೇಡ ಎಂದು ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ರಾಜ್ಯ ಸರ್ಕಾರ ಹಲವು ಹಗರಣದ ಮೂಲಕ ಹಣ ಲೂಟಿ ಮಾಡುತ್ತಿದೆ. ಸದನದ ಹೊರಗೆ, ಒಳಗೆ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ ಮಾಡಿದ್ದೇವೆ. ಆದರೆ ಈ ಪಾದಯಾತ್ರೆ ಈಗ ಮಾಡುವುದು ಸೂಕ್ತವಲ್ಲ. ಸಾವು ನೋವಿನಿಂದ ಜನರು ನೊಂದಿದ್ದಾರೆ. ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ. ಬಳಿಕ ಪಾದಯಾತ್ರೆ ಮಾಡಬಹುದು ಎಂಬ ಅಭಿಪ್ರಾಯವಾಗಿದೆ. ಅದೇ ಮಾತನ್ನು ಕುಮಾರಸ್ವಾಮಿ ಹೇಳಿದ್ದಾರೆ. ಕಳೆದ ವರ್ಷ ರಾಜ್ಯಾದ್ಯಂತ ಬರಗಾಲವಿತ್ತು. ಇದೀಗ ನೆರಯಿಂದ ಬೆಳೆ ನಷ್ಟವಾಗುತ್ತಿದೆ. ಕೆಲ ರೈತರು ಕೃಷಿ ಚಟುವಟಿಕೆ ಪ್ರಾರಂಭ ಮಾಡಿದ್ದಾರೆ. ದೇವೇಗೌಡರು, ಕುಮಾರಣ್ಣ ದೆಹಲಿಯಲ್ಲಿದ್ದಾರೆ. ಪಾದಯಾತ್ರೆ ಬಗ್ಗೆ ಎಲ್ಲರೂ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಶಾಸಕರಾದ ಎಚ್.ಟಿ.ಮಂಜು, ಸುರೇಶ್‌ಬಾಬು, ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ ಇತರರಿದ್ದರು.

ಸಹಾಯವಾಣಿ ಪ್ರಾರಂಭ : ಕೇರಳ ವಯನಾಡಿನಲ್ಲಿ ನಡೆದ ಜಲದುರಂತದಲ್ಲಿ ಸಿಲುಕಿಕೊಂಡಿದ್ದ ಜಿಲ್ಲೆಯ ಮಹಿಳೆಯನ್ನು ಕರ್ನಾಟಕಕ್ಕೆ ವಾಪಸ್ ಕರೆತರಲಾಗಿದೆ. ಮಳವಳ್ಳಿ ತಾಲೂಕು ದಡದಹಳ್ಳಿ ಗ್ರಾಮದ ರಾಧಾ ಎಂಬುವರನ್ನು ರಕ್ಷಣೆ ಮಾಡಿ ರಾಜ್ಯಕ್ಕೆ ಕರೆದುಕೊಂಡು ಬರಲಾಗಿದೆ. ಇನ್ನು ಜಿಲ್ಲೆಯ ಸಾರ್ವಜನಿಕರು ವ್ಯವಹಾರ, ಇತರ ಕೆಲಸಗಳ ನಿಮಿತ್ತವಾಗಿ ವಯನಾಡಿನಲ್ಲಿ ವಾಸಿಸುತ್ತಿದ್ದಲ್ಲಿ ನೆರವು ಕೋರಿ ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ದೂ.08232 -224655, ಜಿಲ್ಲಾಧಿಕಾರಿ ಮೊ.8277863520, ಅಪರ ಜಿಲ್ಲಾಧಿಕಾರಿ ಮೊ.9480783686 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.