ಜಿಲ್ಲೆ

ಅಜ್ಜಂಪುರಕ್ಕೆ ಭದ್ರಾ ನೀರು ಶೀಘ್ರ ಪೂರೈಕೆ

ಅಜ್ಜಂಪುರ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಜ್ಜಂಪುರಕ್ಕೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಪಟ್ಟಣಕ್ಕೆ ಭದ್ರಾ ನೀರು ಪೂರೈಕೆಯಾಗಲಿದೆ ಎಂದು ಶಾಸಕ ಡಿ.ಎಸ್.ಸುರೇಶ್ ತಿಳಿಸಿದರು. ಪಟ್ಣದಲ್ಲಿ ಗುರುವಾರ ನಡೆದ ತಾಪಂ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ನಾವು ಮೊದಲ ಬಾರಿ ಶಾಸಕನಾದ ಸಮಯದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾನೂನು ತೊಡಕುಗಳಿಂದ ಕಾಮಗಾರಿ ವಿಳಂಬವಾಗಿದ್ದು ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ. ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿನ ಪ್ರತಿ ಮನೆಗೂ ಕುಡಿಯುವ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.ಮೆಸ್ಕಾಂ ಗ್ರಾಮಗಳಿಗೆ ನಿರಂತರ ವಿದ್ಯುತ್ ಯೋಜನೆಯಡಿ ಸಂಪರ್ಕ ಕಲ್ಪಿಸಿದ್ದು ಕಾಮಗಾರಿ ಕಳಪೆಯಾಗಿದೆ. ಒಂದು ವರ್ಷದೊಳಗೆ ಕಂಬಗಳು ರಸ್ತೆಗೆ ವಾಲಿವೆ. ದುರಸ್ತಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ಪತ್ರಿಕೆಯಲ್ಲಿ ವರದಿಯಾಗಿದ್ದ ‘ಅಜ್ಜಂಪುರ ಪಶು ಆಸ್ಪತ್ರೆ ಉದ್ಘಾಟನೆಗೂ ಮುನ್ನ ಸೋರುತ್ತಿದೆ’ ಎಂಬ ವರದಿ ಪ್ರಸ್ತಾಪಿಸಿ ಕೂಡಲೇ ಸಂಬಂಧಪಟ್ಟ ಇಲಾಖೆಯಿಂದ ಕಾಮಗಾರಿಗೆ ವರದಿ ಪಡೆದು ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು. ತಾಲೂಕಿನಾದ್ಯಂತ ಬೆಳೆ ಹಾನಿ ವರದಿ ಸರ್ಕಾರಕ್ಕೆ ಸಲ್ಲಿಸಿದ್ದು ಶೀಘ್ರವೆ ರೈತರಿಗೆ ಪರಿಹಾರ ಬರಲಿದೆ ಎಂದು ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪಶು ಆಸ್ಪತ್ರೆ ಅಧಿಕಾರಿ ಪ್ರಭು ಮಾತನಾಡಿ, ಇತ್ತೀಚೆಗೆ ಜಿಲ್ಲೆಯಲ್ಲಿ ಪಶುಗಳಿಗೆ ಚರ್ಮರೋಗ ಕಾಣಿಸಿಕೊಂಡಿದ್ದು, ಅಜ್ಜಂಪುರ ತಾಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಅಜ್ಜಂಪುರದ ಬಿಸಿಎಂ ಹಾಸ್ಟೆಲ್​ಗಳ ಬಳಿ ಪಟ್ಟಣದ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಕೆಲವರು ಸಭೆ ಗಮನಕ್ಕೆ ತಂದರು. ಶಾಸಕ ಡಿ.ಎಸ್.ಸುರೇಶ್ ಪ್ರತಿಕ್ರಿಯಿಸಿ, ಸೌತನಹಳ್ಳಿ ಬಳಿ ತಾಜ್ಯ ವಿಲೇವಾರಿಗೆ ಜಾಗ ಗುರುತಿಸಿದ್ದು ತುರ್ತಾಗಿ ತ್ಯಾಜ್ಯ ಸ್ಥಳಾಂತರಿಸುವಂತೆ ಪಪಂ ಮುಖ್ಯಾಧಿಕಾರಿ ನಾಗರತ್ನಾ ಅವರಿಗೆ ತಿಳಿಸಿದರು.