ಜಿಲ್ಲೆ

ಅಗ್ರಮಾನ್ಯ ಕಾವ್ಯ ನೀಡಿದ ಮಹಾನ ಕವಿ ವಾಲ್ಮೀಕಿ

ಬಾಗಲಕೋಟೆ: ದೇಶಕ್ಕೆ ಮಹಾ ಕಾವ್ಯ, ರಾಮಾಯಣದಂತಹ ಕೃತಿಯನ್ನು ನೀಡಿದ ಮಹಾನ ಕವಿ ವಾಲ್ಮೀಕಿ ಆಗಿದ್ದಾನೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಸಮಾಜ ಮತ್ತು ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನವನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಒಬ್ಬ ಹಿಂದುಳಿದ ವರ್ಗದವನಿಂದ ರಚಿಸಲ್ಪಟ್ಟ ರಾಮಾಯಣ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. ಅದರಲ್ಲಿ ಬರುವ ಸಹೋದರರ ಪ್ರೀತಿ, ತಂದೆ ತಾಯಿಗಳ ಬಗ್ಗೆ ಇರುವ ಗೌರವ, ಗುರು ಶಿಷ್ಯರ ಸಂಬಂಧ, ಹೀಗೆ ಹತ್ತು ಹಲವಾರು ಮೌಲ್ಯಗಳನ್ನು ಈ ಕೃತಿ ಒಳಗೊಂಡಿದೆ ಎಂದರು.

ತಹ ಮಹರ್ಷಿ ವಾಲ್ಮೀಕಿ ಕುಲರವರಾದ ನಾವು ತಾವುಗಳೆಲ್ಲರೂ ಆರ್ಥಿಕವಾಗಿ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಬಲರಾಗಿದ್ದೆವೆಯೇ? ಎಂದು ನಮ್ಮನ್ನೆ ನಾವು ಪ್ರಶ್ನೆ ಮಾಡಿಕೊಳ್ಳುವಂತ ಕಾಲವಾಗಿದೆ. ಇಂದು ಸರಕಾರದ ಹಲವಾರು ಯೋಜನೆಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಸಮಾಜ ಬಾಂದವರು ಬರಬೇಕು. ಎಂದು ತಿಳಿಸಿದರು.

ಮಹರ್ಷಿ ವಾಲ್ಮೀಕಿ ವಿಶ್ವಮಾನವನಾಗಿದ್ದು, ಅಂತವರ ಜಯಂತಿ ಕೇವಲ ಆಚರಣೆಯಾಗದೆ ಕಾರ್ಯರೂಪಗೊಳ್ಳಬೇಕು. ಇದಕ್ಕಾಗಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ಪಿ ಸಿ ಗದ್ದಿಗೌಡರ ಅವರು ಮಾತನಾಡಿ ರಾಮಾಯಣ, ಮಹಾಭಾರತ ಎಂಬ ಎರಡು ಮಹಾ ಕೃತಿಗಳು ಭಾರತದ ಹೆಮ್ಮೆಯ ಗರಿಮೆ ಬಿಂಬಿಸುತ್ತವೆ. ಅದರಲ್ಲೂ ಮಾನವೀತೆಯ ಮೌಲ್ಯಗಳನ್ನು ತಿಳಿಸಿಕೊಟ್ಟ ರಾಮಾಯಣ ಶ್ರೇಷ್ಠ ಗ್ರಂಥವಾಗಿದ್ದು, ಅದನ್ನು ರಚಿಸಿದ ವಾಲ್ಮೀಕಿ ಅಗ್ರಮಾನ್ಯ ಎಂದು ಹೇಳಿದರು.

ಎಮ್ ಎಲ್ ಸಿ ಗಳಾದ ಹಣಮಂತ ಆರ್ ನಿರಾಣಿ ಅವರು ಮಾತನಾಡಿ ಮಹರ್ಷಿ ವಾಲ್ಮೀಕಿ, ಯಾವ ರೀತಿ ಮಾನವ ಮಾನವೀಯತೆಯಿಂದ ಬದುಕಬೇಕು ಎಂಬುದನ್ನು ೨೪ ಸಾವಿರ ಶ್ಲೋಕಗಳಲ್ಲಿ ರಾಮಾಯಣ ಗ್ರಂಥದ ಮೂಲಕ ತಿಳಿಸಿಕೊಟ್ಟಿದ್ದಾರೆ. ರಾಮಾಯಣಕ್ಕೆ ಮಹತ್ವ ಬರಲು ಮಹರ್ಷಿ ವಾಲ್ಮೀಕಿ ಅವರೇ ಕಾರಣರಾಗಿದ್ದಾರೆ ಎಂದರು. ಪಿ ಹೆಚ್ ಪೂಜಾರ ಅವರು ಮಾತನಾಡಿ ರಾಮಾಯಣ ಆದರ್ಶ ಬದುಕಿನ ಒಂದು ಹೂಗುಚ್ಚ. ರಾಮಾಯಣದಿಂದ ಪ್ರಭಾವಿತರಾದ ಮಹಾತ್ಮಾ ಗಾಂಧಿಜೀಯವರು ದೇಶ ರಾಮರಾಜ್ಯ ಆಗಬೇಕು ಎಂದಿದ್ದು ಇದೆ. ರಾಮಾಯಣ ಕೃತಿ ಶಾಂತತೆಯ, ಬದುಕಿನ ನೀತಿಯನ್ನು ಹೇಳಿದೆ. ವಾಲ್ಮೀಕಿಗಿಂತ ಶ್ರೇಷ್ಟ ಮುನಿ ಇನ್ನೊಬ್ಬರು ಇರಲಾರರು ಎಂದು ಹೇಳಿದರೆ ತಪ್ಪಾಗಲಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ವಾಯ್ ಮೇಟಿ ಮಾತನಾಡಿ ವಾಲ್ಮೀಕಿಯ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಒಳ್ಳೆಯ ಆಡಳಿತ ನಡೆಸಿದಲ್ಲಿ ರಾಮರಾಜ್ಯ ಆಗಿಯೇ ಆಗುತ್ತದೆ. ಸಮುದಾಯದವರು ಶಿಕ್ಷಣಕ್ಕೆ ಒತ್ತು ಕೊಟ್ಟು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹಾಂತೇಶ ಜನವಾಡ ವಿಶೇಷ ಉಪನ್ಯಾಸ ನೀಡಿದರು. ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತಹು.

ಜಿಲ್ಲಾಧಿಕಾರಿ ಜಾನಕಿ ಕೆ.ಎಮ್. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಬಾಗಲಕೋಟೆ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ನಂದಾ ಹಣಬರಟ್ಟಿ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.