ಜಿಲ್ಲೆ

ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ ಸಲಹೆ

ಕೆ.ಆರ್.ಪೇಟೆ: ಬೆಂಕಿ ಅವಘಡಗಳು ಸಂಭವಿಸುವುದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕಾದದು ನಮ್ಮೆಲ್ಲರ ಕರ್ತವ್ಯ ಎಂದು ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ ತಿಳಿಸಿದರು.


ತಾಲೂಕಿನ ಶೀಳನೆರೆ ಹೋಬಳಿಯ ಚನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬೆಂಕಿ ಅನಾಹುತಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.


ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಗಳಲ್ಲಿ ಗ್ಯಾಸ್ ಬಳಕೆ ಹೆಚ್ಚಾಗಿದ್ದು, ಬೆಂಕಿ ಅನಾಹುತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ. ಗ್ಯಾಸ್ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ. ಗ್ಯಾಸ್ ಬಳಸುವಾಗ ಅಗತ್ಯ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಒಂದುವೇಳೆ ಅನಾಹುತಗಳು ಸಂಭವಿಸಿದಾಗ ಅಗ್ನಿನಂದಕಗಳನ್ನು ಇಟ್ಟುಕೊಳ್ಳುಬೇಕು. ಬೆಂಕಿ ಅವಘಡ ಸಂಭವಿಸಿದರೆ ಬೆಂಕಿ ಮುಂದಕ್ಕೆ ಚಲಿಸದಂತೆ ಪ್ರಾಥಮಿಕವಾಗಿ ನಿಮ್ಮ ಕೈಲಾದ ಕೆಲಸಗಳನ್ನು ಮಾಡಬೇಕು.

ಗ್ಯಾಸ್ ಲೀಕೇಜ್‌ನಿಂದ ಬೆಂಕಿ ಅನಾಹುತ ಸಂಭವಿಸಿದರೆ ಗೋಣಿಚೀಲವನ್ನು ನೀರಿಗೆ ಅದ್ದಿ ಸಿಲಿಂಡರ್ ಸುತ್ತಲೂ ಸುತ್ತುವ ಮೂಲಕ ಬೆಂಕಿ ಆರಿಸಬಹುದು. ಗ್ರಾಮಗಳಲ್ಲಿ ಹುಲ್ಲಿನ ಮೆದೆಗಳನ್ನು ಆದಷ್ಟು ಅಂತರಗಳಲ್ಲಿ ಹಾಕಿಕೊಳ್ಳಬೇಕು. ನಿಮ್ಮ ಸಮೀಪದಲ್ಲಿ ಬೆಂಕಿ ಅನಾಹುತಗಳು ಸಂಭವಿಸಿದರೆ ಸಮೀಪದ ಅಗ್ನಿಶಾಮಕ ಠಾಣೆಗೆ ವಿಚಾರ ತಿಳಿಸಬೇಕು. ಆಗುವ ಹೆಚ್ಚಿನ ಅನಾಹುತಗಳನ್ನು ತಪ್ಪಿಸಬೇಕು ಎಂದರು.


ಮುಖ್ಯಶಿಕ್ಷಕ ಮರುವನಹಳ್ಳಿ ಬಸವರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ದಿನೇಶ್, ಸಂತೋಷ್, ಕಿರಣ್, ರಾಜೇಂದ್ರ, ಶಿಕ್ಷಕ ಮಂಜು, ಅಂಗನವಾಡಿ ಶಿಕ್ಷಕಿ ಬಿ.ಬಿ.ಪ್ರಮಿಳಾ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷೆ ಶ್ರುತಿ, ಸದಸ್ಯೆ ಮಮತಾ, ಗ್ರಾಮದ ಮುಖಂಡರಾದ ಮಂಜೇಗೌಡ ವಿಜಯ್‌ಕುಮಾರ್, ವಸಂತಕುಮಾರ್, ಮಂಜೇಗೌಡ ಹಾಜರಿದ್ದರು.