ಕಲಬುರಗಿ: ಅಗ್ನಿ ಶಾಮಕ ದಳದ ಕಲಬುರಗಿ ಪ್ರಾದೇಶಿಕ ಅಧಿಕಾರಿ ಲಕ್ಕಪ್ಪ ಇ.ಎಸ್ ಎಂಬುವರು ಲಂಚದ ಹಣ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಬುಧವಾರ ಬೀಸಿದ ಬಲೆಗೆ ಸಿಕ್ಕು ಬಿದ್ದಿದ್ದಾರೆ.
ಕಾಲೇಜು ಆರಂಭಗೊಳ್ಳುವ ಕಟ್ಟಡಕ್ಕೆ ನಿರಾಪೇಕ್ಷಣಾ ಪ್ರಮಾಣ ಪತ್ರ (ಎನ್ಒಸಿ) ನೀಡಲು 75 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ನಗರದ ಶಹಾಬಜಾರ್ ರಸ್ತೆಯಲ್ಲಿರುವ ಅಗ್ನಿ ಶಾಮಕ ಕಚೇರಿಯಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಎಸಿಬಿಯವರು ದಾಳಿ ನಡೆಸಿದ್ದಾರೆ.
ನಾಗರಾಜ ಎಂಬುವರು ಕಲಬುರಗಿ ನಗರದಲ್ಲಿ ಗಿರಿ ಕಾಲೇಜು ಆರಂಭಿಸಲು ಉದ್ದೇಶಿಸಿದ್ದರು. ಅದಕ್ಕಾಗಿ ಎನ್ಒಸಿಗೆ ಅಜರ್ಿ ಸಲ್ಲಿಸಿದಾಗ ಅಗ್ನಿ ಶಾಮಕ ಅಧಿಕಾರಿ ಲಕ್ಕಪ್ಪ ಲಂಚ ಬೇಡಿಕೆಯಿಟ್ಟು, ಕೆಲಸ ಮಾಡಿರಲಿಲ್ಲ. ಮಾತುಕತೆಯಲ್ಲಿ ಹಣ ಕೊಡಲು ಒಪ್ಪಿದಾಗ ಕೆಲಸ ಮಾಡಿದ್ದು ಬುಧವಾರ ಬರಲು ಹೇಳಿದ್ದರು.
ಅದರಂತೆ ನಾಗರಾಜ ಅವರಿಂದ ಹಣ ಪಡೆದುಕೊಳ್ಳುವಾಗ ಎಸಿಪಿ ಎಸ್ಪಿ ಮಹೇಶ್ ಮೇಘಣ್ಣನವರ ಮತ್ತು ಡಿಎಸ್ಪಿ ವೀರೇಶ ಕರಡಿಗುಡ್ಡ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಮಹ್ಮದ ಇಸ್ಮಾಯಿಲ್ ಶರೀಫ್, ರಾಘವೇಂದ್ರ ಭಜಂತ್ರಿ ಮತ್ತು ಸಿಬ್ಬಂದಿ ಕೂಡಿಕೊಂಡು ದಾಳಿ ನಡೆಸಿ ಲಂಚದ ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.
ಅಗ್ನಿ ಶಾಮಕ ಕಚೇರಿಯಲ್ಲಿ ಲಕ್ಕಪ್ಪ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು. ಪಂಚನಾಮೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಕುರಿತು ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.