ಜಿಲ್ಲೆ

ಅಗ್ನಿ ಅವಘಡ ನಿಯಂತ್ರಣ ಕುರಿತು ಜಾಗೃತಿ

ಶ್ರೀರಂಗಪಟ್ಟಣ: ಏ.14ರಿಂದ 20 ರವರೆಗೂ ಅಗ್ನಿಶಾಮಕ ಇಲಾಖೆಯಿಂದ ಸೇವಾ ಸಪ್ತಾಹ ನಡೆಸಲಾಗುತ್ತಿದ್ದು, ಸಾರ್ವಜನಿಕರಿಗೆ ಅಗ್ನಿ ಅವಘಡಗಳನ್ನು ನಿಯಂತ್ರಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ಅಂಬರೀಶ್ ಉಪ್ಪಾರ್ ತಿಳಿಸಿದರು.

ಪಟ್ಟಣದ ರಾಜ್ಯಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಸ್ನಾನಘಟ್ಟ, ಪ್ರಮುಖ ವೃತ್ತಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಲಾಖೆಯ ಅಧಿಕಾರಿ-ಸಿಬ್ಬಂದಿಯೊಂದಿಗೆ ಸೋಮವಾರ ವಿವಿಧ ಜಾಗೃತಿ ಫಲಕಗಳೊಂದಿಗೆ ಅರಿವು ಮೂಡಿಸಿ ಬಳಿಕ ಅವರು ಮಾತನಾಡಿದರು.

1944ರಲ್ಲಿ ಮುಂಬೈನಲ್ಲಿ ನಡೆದ ಅಗ್ನಿ ದುರಂತವೊಂದರಲ್ಲಿ ನಮ್ಮ ಇಲಾಖೆಯ 66 ಸಿಬ್ಬಂದಿ ವೀರ ಮರಣ ಅಪ್ಪಿದರು. ಆ ಘಟನೆಯ ಕಹಿ ನೆನಪಿನಲ್ಲಿ ಅಗ್ನಿಶಾಮಕ ಇಲಾಖೆ ಸೇವಾ ಸಪ್ತಾಹ ಕೈಗೊಂಡು ಜನರ ರಕ್ಷಣೆಗೆ ಅಗತ್ಯ ಅರಿವು ಮೂಡಿಸುತ್ತಿದೆ.

ಜನರು ಸಹ ಇಂತಹ ಅವಶ್ಯಕ ಮಾಹಿತಿಗಳನ್ನು ಪಡೆದು ದುರಂತಗಳು ಉಂಟಾದ ಸಂದರ್ಭದಲ್ಲಿ ಆತಂಕ ಹಾಗೂ ಗೊಂದಲಕ್ಕೆ ಒಳಗಾಗದೆ ಪರಿಸ್ಥಿತಿ ನಿಭಾಯಿಸಲು ಇವು ನೆರವಾಗಲಿದೆ. ಜತೆಗೆ ಪ್ರಮುಖವಾಗಿ ಹತ್ತಿರದ ಅಗ್ನಿಶಾಮಕ ಠಾಣೆಗಳಿಗೆ ತುರ್ತು ಮಾಹಿತಿ ನೀಡಿ ಸೇವಾ ನೆರವು ಪಡೆಯಬೇಕಾಗಿದ್ದು, ನಮ್ಮ ತಂಡವು ಎಂತಹ ಕ್ಲಿಷ್ಟಕರ ಸಮಯದಲ್ಲೂ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುತ್ತದೆ ಎಂದರು. ಅಗ್ನಿಶಾಮಕ ದಳದ ವೆಂಕಟೇಶ್, ಉದಯ್ ಕುಮಾರ್ ನುರಸಾಬ್, ಸಿಬ್ಬಂದಿ ರಮೇಶ್ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.