ಚಿತ್ರದುರ್ಗ: ನಗರದ ಹೊರವಲಯ ಸೀಬಾರದ ವಿಶ್ವಮಾನವ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿರುವ ‘ಚಿಗುರು’ ವಿಶೇಷ ಬೇಸಿಗೆ ಶಿಬಿರದ ಅಂಗವಾಗಿ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಶುಕ್ರವಾರ ಪ್ರಾತ್ಯಕ್ಷಿತೆ ಕಾರ‌್ಯಕ್ರಮ ಏರ್ಪಡಿಸಲಾಗಿತ್ತು. ಅಗ್ನಿಶಾಮಕ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರಾಮಕೃಷ್ಣಪ್ಪ ಅವರು, ಅಗ್ನಿ ಅವಘಡಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳೆಡೆ ಪ್ರಾತ್ಯಕ್ಷಿತೆ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಿದರು. ಅಗ್ನಿ ಅವಘಡಗಳಾದಾಗ ಕೂಡಲೇ ಅಗ್ನಿಶಾಮಕ ದಳಕ್ಕೆ ತ್ವರಿತಗತಿಯಲ್ಲಿ ಮಾಹಿತಿ ನೀಡಿದರೆ ಸಂಭವನೀಯ ನಷ್ಟ ತಪ್ಪಿಸಲು ಸಾಧ್ಯವಾಗಲಿದೆ ಎಂದರು.
ಮುಖ್ಯಶಿಕ್ಷಕ ಬಿ.ಜಿ.ಶಿವರುದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಮಂಜು, ಪ್ರಜ್ವಲ್, ಪವನ್ ಕುಮಾರ್ ಇದ್ದರು.