ಜಿಲ್ಲೆ

ಅಗಸನಕಲ್ಲು ಖಬರಸ್ಥಾನ್ ಜಾಗ ಒತ್ತುವರಿ?

ಚಿತ್ರದುರ್ಗ: ಮುಸ್ಲಿಂ ಸಮುದಾಯದವರಿಗೆ ಮೀಸಲಿಟ್ಟ ಅಗಸನಕಲ್ಲು ಸಮೀಪದ ಖಬರಸ್ಥಾನ್ ಜಾಗವನ್ನು ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಕೆ.ಅನ್ವರ್ ಭಾಷಾ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಸಮುದಾಯದ ಕೆಲ ಯುವಕರಿಂದಲೇ ಕೇಳಿಬಂದಿದೆ.

ಈ ವಿಚಾರವೀಗ ನಗರ ಪೊಲೀಸ್ ಠಾಣೆಯ ಅಂಗಳ ತಲುಪಿದೆ. ಮಂಗಳವಾರ ರಾತ್ರಿಯಿಂದ ವ್ಯಾಪಕ ಚರ್ಚೆಗೂ ಗ್ರಾಸವಾಗಿದೆ.

ರಾಜ್ಯ ಸರ್ಕಾರ 1986ರಲ್ಲಿ 6 ಎಕರೆ ಜಮೀನನ್ನು ಖಬರಸ್ಥಾನ್‌ಗೆ ಮಂಜೂರು ಮಾಡಿದೆ. ಇದನ್ನು ಸರ್ವೆ ಮಾಡಿಸಲು ಮಿನರ್ವ ಫೌಂಡೇಶನ್ 2021ರ ಸೆಪ್ಟೆಂಬರ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು ಎಂದು ಅಜ್ಮಲ್ ಅಹ್ಮದ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರ ಆದೇಶಿಸಿದರೂ ಕೆಲವರು ಸರ್ವೆ ಮಾಡಿಸದಂತೆ ತಡೆಗಟ್ಟಿದರು. ಅನ್ವರ್ ಭಾಷಾ ಅವರೇ ಜಮೀನನ್ನು ಒತ್ತುವರಿ ಮಾಡಿಕೊಂಡು ಶಾಲೆ ನಿರ್ಮಿಸಿದ್ದಾರೆಂದು ಮುಸ್ಲಿಂ ಸಮುದಾಯದ ಕೆಲ ಯುವಕರು ಆರೋಪಿಸುತ್ತಿದ್ದಾರೆ ಎಂದರು.

ಈ ಸಂಬಂಧ ಸೈಯದ್ ಇಮ್ತಿಯಾಜ್ ಎಂಬುವವರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಇದು ಸರಿಯಲ್ಲವೆಂದು ಕೆಲವರು ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಅದರ ವಿಚಾರಣೆಗಾಗಿ ಬಂದಿದ್ದು, ಅಧಿಕಾರಿಗಳು ಸರ್ಕಾರದಿಂದ ಸರ್ವೆ ಮಾಡಿಸಿ ಇತ್ಯರ್ಥ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆಂದು ಹೇಳಿದರು.

ಖಬರಸ್ಥಾನ್ ವಕ್ಫ್ ಬೋರ್ಡ್‌ಗೆ ಸೇರಿದ್ದಾಗಿದ್ದು, ಕೇಂದ್ರ ಪ್ರಾಚೀನ ಮತ್ತು ಪುರಾತತ್ವ ಇಲಾಖೆ ವ್ಯಾಪ್ತಿಯ ಸಮೀಪದ ಬೆಟ್ಟವನ್ನು ಹಾಳು ಮಾಡಿದ್ದಾರೆ ಎಂಬ ಆರೋಪವೂ ಅನ್ವರ್ ಭಾಷಾ ಮೇಲೆ ಬಂದಿದೆ. ಈ ಆರೋಪದಿಂದ ಮುಕ್ತರಾಗಲು ವಕ್ಫ್ ಸಚಿವರು ಮಧ್ಯ ಪ್ರವೇಶಿಸಿ, ಭಾಷಾ ಅವರ ಮನವೊಲಿಸಿ, ಜಂಟಿ ಸರ್ವೆ ಮೂಲಕ ಸತ್ಯಾಸತ್ಯತೆ ತಿಳಿಯಲು, ಆರೋಪದಿಂದ ಮುಕ್ತರಾಗಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಜಾಮೀಯಾ ಮಸೀದಿ ಸದಸ್ಯ ಸುಬಾನ್‌ಉಲ್ಲಾ ಮಾತನಾಡಿ, ನಗರದಲ್ಲಿ ನೀಡಿದ್ದ ಜಾಗ ಭರ್ತಿಯಾಗಿದೆ. ಮನೆ ಕಟ್ಟಲು ಕೇಳಿಕೊಳ್ಳುತ್ತಿಲ್ಲ. ವಕ್ಫ್ ಬೋರ್ಡ್ ಮೂಲಕವೇ ಸರ್ವೆ ಕೈಗೊಂಡು ಒತ್ತುವರಿಯಾಗಿದ್ದರೆ, ಅದನ್ನು ತೆರವುಗೊಳಿಸಿ ಖಬರಸ್ಥಾನ್ ವಶಕ್ಕೆ ಪಡೆಯಬೇಕು. ಅವರು ರಾಜಕೀಯವಾಗಿ ಬೆಳವಣಿಗೆ ಹೊಂದುತ್ತಿರುವುದು ಸಂತಸದ ವಿಚಾರ. ಆದರೆ, ಸಮಸ್ತ ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟ ಜಾಗ ಯಾರೇ ಒತ್ತುವರಿ ಮಾಡಿಕೊಂಡರು ಹೋರಾಟ ನಿಲ್ಲದು ಎಂದು ತಿಳಿಸಿದರು.