ಕುಮಟಾ: ಲಾಕ್ ಡೌನ್ ಸಮಯದಲ್ಲಿ ಕ್ಷೇತ್ರದ ಜನರ ಆರೋಗ್ಯ ಹಾಗೂ ದಿನನಿತ್ಯದ ಅಗತ್ಯಗಳಿಗೆ ಸಹಾಯ ಮಾಡುತ್ತಿದ್ದೇನೆ. ಜೊತೆಗೆ ಸರ್ಕಾರದ ಸೌಲಭ್ಯಗಳನ್ನೂ ಅಗತ್ಯವುಳ್ಳ ಜನರಿಗೆ ಮುಟ್ಟಿಸುತ್ತಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಸೋಮವಾರ ಡಯಟ್ ಆವಾರದಲ್ಲಿ ಕುಮಟಾದಿಂದ ಹೊನ್ನಾವರ, ಅಘನಾಶಿನಿ ಹಾಗೂ ಅಂಕೋಲಾಕ್ಕೆ ಪ್ರಯಾಣಿಕರನ್ನು ಸಾಗಿಸುವ ಟೆಂಪೋ ಚಾಲಕ-ಮಾಲೀಕರು ಹಾಗೂ ಸಹಾಯಕರಿಗೆ ಕಾರ್ವಿುಕ ಇಲಾಖೆಯಿಂದ ನೀಡಿದ ಜೀವನಾವಶ್ಯಕ ಸಾಮಗ್ರಿ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು.
ರೈತರು ಬೆಳೆದ ತರಕಾರಿ ಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ್ದೇನೆ. ಔಷಧ ಸಿಗದೇ ಪರದಾಡಿದವರಿಗೆ ಔಷಧ ತರಿಸಿಕೊಟ್ಟಿದ್ದೇನೆ. ದಿನಸಿ ಹಂಚಿದ್ದೇನೆ. ಇದೀಗ ರಾಜ್ಯ ಕಾರ್ವಿುಕ ಇಲಾಖೆಯಡಿ ಸಚಿವ ಶಿವರಾಮ ಹೆಬ್ಬಾರ ಅವರು ಕಳಿಸಿಕೊಟ್ಟ 3000 ಜೀವನಾವಶ್ಯಕ ಕಿಟ್ಗಳಲ್ಲಿ 2000 ಕಿಟ್ಗಳನ್ನು ಗ್ರಾಮೀಣ ಭಾಗದ ಅವಶ್ಯಕತೆ ಇರುವವರಿಗೆ ತಲುಪಿಸಿದ್ದೇನೆ. ಉಳಿದ ಕಿಟ್ಗಳಲ್ಲಿ ಇಂದು ಟೆಂಪೋ ಚಾಲಕ-ಮಾಲೀಕರು ಹಾಗೂ ಸಹಾಯಕರಿಗೆ ವಿತರಿಸಲಾಗುತ್ತಿದೆ ಎಂದರು.
ಕರೊನಾ ಸೋಂಕು ಮುಂಜಾಗ್ರತೆ ಕುರಿತು ಡಾ. ಜಿ.ಜಿ. ಹೆಗಡೆ ಮಾತನಾಡಿ, ಕರೊನಾ ಸೋಂಕು ಬಂದ ಕೂಡಲೇ ಸಾಯುತ್ತೇವೆ ಎಂಬ ಭಯ ಬೇಡ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಅನಗತ್ಯ ಮನೆ ಹೊರಗೆ ಓಡಾಡಬೇಡಿ. ಲಾಕ್ಡೌನ್ ನಿಯಮ ಪಾಲನೆ ಮಾಡಿ ಎಂದು ಸಲಹೆ ನೀಡಿದರು.
ಇದೇ ವೇಳೆ ದಾನಿಗಳಾದ ಯೋಗೀಶ ಕಾಮತ ಹಾಗೂ ಚೇತನ ಶೇಟ ಅವರು ಎಲ್ಲರಿಗೂ ಉಚಿತವಾಗಿ ಮಾಸ್ಕ್ಗಳನ್ನು ವಿತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪದಾಧಿಕಾರಿಗಳಾದ ಎಂ.ಜಿ. ಭಟ್, ವಿನಾಯಕ ಭಟ್ ಸಂತೇಗುಳಿ, ವಿಶ್ವನಾಥ ನಾಯ್ಕ, ಪುರಸಭೆ ಸದಸ್ಯ ಮಹೇಶ ನಾಯ್ಕ, ಸೂರ್ಯಕಾಂತ ಗೌಡ, ರೋಟರಿ ಅಧ್ಯಕ್ಷ ಸುರೇಶ ಭಟ್ ಇನ್ನಿತರರಿದ್ದರು.