ಕೋಲಾರ: ಜಿಲ್ಲೆಯಲ್ಲಿ ನೀರಿಗಾಗಿ ಕೆರೆಗಳು ಮತ್ತು ಅಂತರ್ಜಲ ಅವಲಂಬಿಸಿದ್ದು, ಅಂತರ್ಜಲ ಮರುಪೂರಣ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಪ್ರಕ್ರಿಯೆಯನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಸಭೆಯನ್ನುದ್ದೇಶಿಸಿ ಮಾತನಾಡಿ, ಅತ್ಯಗತ್ಯ ಮತ್ತು ಅನಿವಾರ್ಯವೆನಿಸಿದರೆ ಮಾತ್ರ ಕೊಳವೆ ಬಾವಿಗಳನ್ನು ಕೊರೆಸಬೇಕು. ಸಾಧ್ಯವಾದಷ್ಟು ಮಳೆ ಕೊಯ್ಲು ಪದ್ಧತಿ, ಅಂತರ್ಜಲ ಮರುಪೂರಣದಂತಹ ವಿಧಾನಗಳಿಂದ ನೀರು ಸಂಗ್ರಹ ಮಾಡಬೇಕು. ಉಳಿದಂತೆ ಕೆರೆಗಳಿಗೆ ಕೆ.ಸಿ. ವ್ಯಾಲಿ ನೀರನ್ನು ಹರಿಸಲಾಗುತ್ತಿದ್ದು ಇದರಿಂದ ಅಂತರ್ಜಲ ಮರುಪೂರಣ ಕ್ರಿಯೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಿಂದ ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳಿಗೆ ಪ್ರಾಧಿಕಾರದಿಂದ ಅನುಮತಿ ನೀಡಲಾಗಿದ್ದು, ಇನ್ನು ಮುಂದೆ ಕೊಳವೆಬಾವಿಗಳನ್ನು ಕೊರೆಯುವಾಗ ಪ್ರಾಧಿಕಾರದ ಅನುಮತಿ ಪಡೆಯುವಂತೆ ತಿಳಿಸಿದರು.
ಜಿಪಂ ಸಿಇಒ ಪದ್ಮಾಬಸವಂತಪ್ಪ, ಹಿರಿಯ ಭೂವಿಜ್ಞಾನಿ ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.