ಬಳ್ಳಾರಿ : ಚುನಾವಣೆ ಸಂಬಂಧಿತ ಅಥವಾ ಇಲಾಖೆಯ ಅನ್ಯ ಕರ್ತವ್ಯದಲ್ಲಿ ನಿರತರಾಗುವ ಅಧಿಕಾರಿ, ಸಿಬ್ಬಂದಿ ಅಲ್ಲದೆ ಅಗತ್ಯ ಸೇವೆಗಳಡಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಮೇ. 01 ರಿಂದ ಮತ ಚಲಾವಣೆಗೆ ಅವಕಾಶ ಕಲ್ಪಿಸಿದ್ದು, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದ ಗಾಂಧಿ ಭವನದಲ್ಲಿ ವಿವಿಧ ಅಧಿಕಾರಿ, ಸಿಬ್ಬಂದಿಯಿಂದ ಬುಧವಾರ ಮತದಾನ ನಡೆಯಿತು.
ಮೇ. 07 ರಂದು ಮತದಾನಕ್ಕೆ ಸಾಧ್ಯವಾಗದ ಕಾರಣ ಅಂತಹವರಿಗೆ ಮೇ. 01 ರಿಂದ 03 ರವರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಮತದಾನ ದಿನದಂದು ಚುನಾವಣೆ ಸಂಬಂಧಿತ ಅಥವಾ ಇಲಾಖೆಯ ಅನ್ಯ ಕರ್ತವ್ಯದಲ್ಲಿ ನಿರತರಾಗುವ ಅಧಿಕಾರಿ, ಸಿಬ್ಬಂದಿ ಮೇ. 01 ರಿಂದ 06 ರವರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಿದೆ.
ಎಡಿಸಿ ಮಹಮ್ಮದ್ ಝುಬೇರ್, ಪೊಲೀಸ್, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಪೋಸ್ಟಲ್ ವೋಟಿಂಗ್ ಹಾಗೂ ಫೆಸಿಲಿಟೇಶನ್ ಸೆಂಟರ್‌ಗೆ ಆಗಮಿಸಿ ಪರಿಶೀಲಿಸಿದರು.