ಜಿಲ್ಲೆ

ಅಗತ್ಯ ವಸ್ತುಗಳ ಬೆಲೆಏರಿಕೆಗೆ ಖಂಡನೆ : ಕಚೇರಿ ಎದುರು ಸಿಪಿಐ ಕಾರ್ಯಕರ್ತರ ಪ್ರತಿಭಟನೆ

ತುಮಕೂರು: ಪೆಟ್ರೋಲ್​, ಡಿಸೇಲ್​, ಗ್ಯಾಸ್​, ವಿದ್ಯುತ್​ ಸೇರಿ ಅಗತ್ಯ ವಸ್ತುಗಳ ಬೆಲೆಏರಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಸಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪೆಟ್ರೋಲ್​, ಡಿಸೇಲ್​, ಗ್ಯಾಸ್​, ವಿದ್ಯುತ್​ ಸೇರಿ ಅಗತ್ಯ ವಸ್ತುಗಳ ಬೆಲೆಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಹಾಗಾಗಿ, ಭಾವನಾತ್ಮಕ ವಿಚಾರ ಮುಂದಿಟ್ಟು ಬೆಲೆ ಏರಿಕೆ ಮರೆಸಲು ಯತ್ನಿಸುತ್ತಿವೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್​ ಆರೋಪಿಸಿದರು.

ಜನ ಸಾಮಾನ್ಯರ ದಿನನಿತ್ಯ ಬಳಕೆಯ ಅಗತ್ಯವಸ್ತುಗಳ ಬೆಲೆಗಳನ್ನು ಇಳಿಸುವುದಾಗಿ, ನಿರುದ್ಯೋಗ ನಿವಾರಣೆ ಮಾಡುವುದಾಗಿ, ಭ್ರಷ್ಟಾಚಾರ ತಡೆಗಟ್ಟುವುದಾಗಿ ವಾಗ್ದಾನ ನೀಡಿ ಅಧಿಕಾರ ಪಡೆದ ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ಜನಸಾಮಾನ್ಯರು ಬೆಲೆ ಏರಿಕೆ ಹೊರೆ ಹೊರಬೇಕಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗ 70 ರೂಪಾಯಿಯಿದ್ದ ಒಂದು ಲೀಟರ್​ ಪೆಟ್ರೋಲ್​ ಬೆಲೆ 112ರೂ.ಗೆ ಏರಿಕೆಯಾಗಿದೆ. ಡೀಸೆಲ್​ ದರ 58 ರೂಪಾಯಿಂದ 98 ಕ್ಕೆತಲುಪಿದೆ. 400 ರೂಪಾಯಿಗಳಿದ್ದ ಗ್ಯಾಸ್​ ಸಿಲಿಂಡರ್​ ಬೆಲೆ 1100ಕ್ಕೆ ತಲುಪಿ ಜನ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.

ಜನರ ಗಮನವನ್ನು ಬೆಲೆ ಏರಿಕೆಯಿಂದ ಬೇರೆಡೆ ಸೆಳೆಯಲು ಇನ್ನಿಲ್ಲದಂತೆ ಕೋಮು ಸೌಹಾರ್ದವನ್ನು ಕದಡುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ, ಹಿಜಾಬ್​, ಹಲಾಲ್​, ಜಟ್ಕಾ ಕಟ್​ಗಳ ಹೆಸರಿನಲ್ಲಿ ಭಾವನಾತ್ಮಕವಾಗಿ ಮಾತನಾಡಿ ಬೆಲೆ ಏರಿಕೆಯನ್ನು ನಿರಂತರವಾಗಿ ಮಾಡುತ್ತಿರುವ ಬಿಜೆಪಿ ಸರ್ಕಾರಗಳಿಗೆ ಮರ್ಯಾದೆ ಇದ್ದರೆ, ಬಡ ಮತ್ತು ಮಧ್ಯಮವರ್ಗದ ಜನರ ಮೇಲಿರುವ ಬೆಲೆ ಏರಿಕೆಯ ಹೊರೆಯನ್ನು ಇಳಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಚಿಕ್ಕಣ್ಣ, ರಾಮಣ್ಣ, ಗಂಗಾಧರಪ್ಪ, ಪುನೀತ್​, ಹನುಮಂತರಾಯಪ್ಪ ಮತ್ತಿತರರು ಇದ್ದರು.

ದುರಾಡಳಿತದಿಂದ ಹಣದುಬ್ಬರ: ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬ್ಬಲ್​ ಇಂಜಿನ್​ ಸರ್ಕಾರದಿಂದಾಗಿ ರಸಗೊಬ್ಬರಗಳ ಬೆಲೆಗಳನ್ನೂ ಏರಿಸಿ ರೈತಸಮೂಹವನ್ನು ವಂಚಿಸುತ್ತಿವೆ. ಆಹಾರಧಾನ್ಯ, ಅಡುಗೆಎಣ್ಣೆ, ವಿದ್ಯುತ್​ ದರ ಸೇರಿ ದಿನನಿತ್ಯ ಉಪಯೋಗಿಸುವ ಪದಾರ್ಥಗಳ ಬೆಲೆಗಳು ಸಹ ಗಗನಮುಟ್ಟಿವೆ, ಬೆಲೆ ಏರಿಕೆಯಿಂದ ಕಂಗೆಟ್ಟಿರುವ ದುಡಿಯುವ ವರ್ಗದ ದುಡಿಮೆಯನ್ನು ಹೆಚ್ಚಿಸಲು ಕ್ರಮವಹಿಸದ ಸರ್ಕಾರಗಳು ದುರಾಡಳಿತದಿಂದ ಹಣದುಬ್ಬರ, ಬೆಲೆ ಏರಿಕೆಯಂತಹ ಕೃತ್ಯಗಳಿಗೆ ಬೆನ್ನೆಲುಬಾಗಿರುವುದು ವಿಪರ್ಯಾಸ ಎಂದು ಸಿಪಿಐ ಮುಖಂಡ ಕಂಬೇಗೌಡ ಹೇಳಿದರು.