ಮೈಸೂರು: ಕೆಎಂಎಫ್‌ನ ನಂದಿನಿ ಹಾಲಿನ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದ ಮೈಸೂರಿನ ನ್ಯಾಯಾಲಯದ ಮುಂಭಾಗದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ದರ ಹೆಚ್ಚಳ ಮಾಡಿ ಜನತೆಗೆ ಶಾಕ್ ನೀಡಿದೆ. 5 ಗ್ಯಾರಂಟಿ ಯೋಜನೆ ಜಾರಿಗೆ ಹಣ ಸಾಲುತ್ತಿಲ್ಲ. ಆದಾಯ ಕ್ರೂಢೀಕರಿಸಲು ವಿವಿಧ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿದೆ. ಮದ್ಯದ ಮೇಲೆ ಶೇ.20ರಷ್ಟು ತೆರಿಗೆ ಏರಿಕೆ ಮಾಡಿದ್ದು, ತರಕಾರಿ ಬೆಲೆ ಸಹ ದುಪ್ಪಟ್ಟಾಗಿದೆ. ಇವುಗಳನ್ನೆಲ್ಲ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾದ ಸರ್ಕಾರವು ಈಗ ಹಾಲಿನ ಮಾರಾಟ ದರವನ್ನೂ ಹೆಚ್ಚಿಸಿ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ದರ ಏರಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸಂಘಟನೆಯ ತೇಜೇಶ್ ಲೋಕೇಶ್ ಗೌಡ, ಪ್ರಭು ಶಂಕರ್, ಡಾ.ಶಾಂತರಾಜೇಅರಸ್, ಕೃಷ್ಣಪ್ಪ, ಸುರೇಶ್ ಗೋಲ್ಡ್, ವಿಜಯೇಂದ್ರ, ಅಂಬಾ ಅರಸ್, ನೇಹಾ, ರಮ್ಯಾ ಇನ್ನಿತರು ಇದ್ದರು.