- ನಾಪೋಕ್ಲು: ಸಾರ್ವಜನಿಕ ಕ್ಷೇತ್ರವನ್ನು ನಾವೇ ಆಯ್ಕೆ ಮಾಡಿಕೊಂಡು ಬಂದಿರುವುದರಿಂದ ಪ್ರತಿಯೊಬ್ಬ ಪ್ರಜೆಗೂ ನ್ಯಾಯಯುತ ಸೌಲಭ್ಯ ಹಾಗೂ ಸವಲತ್ತು ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎನ್.ಪೊನ್ನಣ್ಣ ಹೇಳಿದರು.
ನಾಪೋಕ್ಲು ಶ್ರೀ ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಂದಾಯ ಇಲಾಖೆಯಿಂದ ಹಕ್ಕು ಪತ್ರ ಮತ್ತು ಪಿಂಚಣಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುವುದು. ಸಮಸ್ಯೆಗಳನ್ನು ಆದ್ಯತೆ ಅನುಸಾರ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಪ್ರವೀಣ್ ಕುಮಾರ್ ಮಾತನಾಡಿ, ಪ್ರತಿ ತಿಂಗಳು 15 ದಿನಗಳಿಗೊಮ್ಮೆ ಹೋಬಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಸರಿಪಡಿಸಿಕೊಡಲಾಗುವುದು ಎಂದು ಹೇಳಿದರು.