ಜಿಲ್ಲೆ

ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ 15ರಿಂದ

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಖಿಲ ಭಾರತ ಮಾಧ್ವ ಮಹಾಮಂಡಳ ವತಿಯಿಂದ ಸೆ. 15, 16ರಂದು ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ 29ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಹರ್ಷ ಡಂಬಳ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 15ರಂದು ಬೆಳಗ್ಗೆ 8 ಗಂಟೆಗೆ ಹಳಿಯಾಳ ನಾಕಾದಿಂದ ಸಮ್ಮೇಳನದ ಶೋಭಾಯಾತ್ರೆ ನಡೆಯಲಿದೆ. 9 ಗಂಟೆಗೆ ಸಮ್ಮೇಳನದ ಉದ್ಘಾಟನೆ ನೆರವೇರಲಿದ್ದು, ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು, ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದಿವ್ಯೋಪಸ್ಥಿತಿ ವಹಿಸುವರು. ಅತಿಥಿಯಾಗಿ ಶಾಸಕ ಅರವಿಂದ ಬೆಲ್ಲದ ಆಗಮಿಸುವರು. ಪಂ. ಜಯತೀರ್ಥಾಚಾರ್ಯ ಮಳಗಿ ಸಮ್ಮೇಳನಾಧ್ಯಕ್ಷತೆ ವಹಿಸುವರು ಎಂದರು.
ಬೆಳಗ್ಗೆ 11 ಗಂಟೆಗೆ ವಿದ್ವತ್‌ಗೋಷ್ಠಿ, ಮಧ್ಯಾಹ್ನ 12.30ಕ್ಕೆ ದಾನಿಗಳಿಗೆ ಸನ್ಮಾನ, ಮಧ್ಯಾಹ್ನ 2.30ಕ್ಕೆ ಮಹಿಳಾಗೋಷ್ಠಿ, ಮಧ್ಯಾಹ್ನ 3.30ಕ್ಕೆ ಸಂವಾದ, ಸಂಜೆ 4.30ಕ್ಕೆ ಯುವ ಗೋಷ್ಠಿ ನಡೆಯಲಿದೆ. ರಾತ್ರಿ 8 ಗಂಟೆಗೆ ಪುತ್ತೂರು ನರಸಿಂಹನಾಯಕ್ ಮತ್ತು ತಂಡದಿಂದ ದಾಸವಾಣಿ ನಡೆಯಲಿದೆ. ಸೆ. 16ರಂದು 9.30ಕ್ಕೆ ದಾಸ ಸಾಹಿತ್ಯ ಗೋಷ್ಠಿ, ಬೆಳಗ್ಗೆ 11 ಗಂಟೆಗೆ ಜ್ಯೋತಿಷ್ಯ ಗೋಷ್ಠಿ: ‘ಮುಹೂರ್ತ’ ಚಿಂತನ, ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದಿವ್ಯೋಪಸ್ಥಿತಿ ವಹಿಸುವರು. ಅತಿಥಿಗಳಾಗಿ ನ್ಯಾಯಮೂರ್ತಿ ವಿ. ಶ್ರೀಶಾನಂದ, ಮೇಯರ್ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ಆಯುಕ್ತ ಲಾಭೂರಾಮ ಪಾಲ್ಗೊಳ್ಳಲಿದ್ದಾರೆ ಎಂದರು.