ಜಿಲ್ಲೆ

ಅಕ್ಷರ ಲಕ್ಷ ಗಾಯತ್ರಿ ಯಜ್ಞ ಸಂಪನ್ನ

ಮೈಸೂರು: ಶ್ರೀಸ್ವರ್ಣ ನೃಸಿಂಹ ದತ್ತ ಪೀಠಿಕಾ ಸೇವಾ ಟ್ರಸ್ಟ್‌ನಿಂದ ನಗರದ ಖಿಲ್ಲೆ ಮೊಹಲ್ಲಾದ ಶಂಕರ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೂರು ದಿನಗಳ ಅಕ್ಷರ ಲಕ್ಷ ಗಾಯತ್ರಿ ಯಜ್ಞ ಯಶಸ್ವಿಯಾಗಿ ಸಂಪನ್ನಗೊಂಡಿತು.
ಶ್ರೀಅರ್ಜುನ ಅವಧೂತ ಅವರ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಯಜ್ಞದಲ್ಲಿ ವರ್ಷದ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿ ಯಾವುದೇ ಅನಾಹುತ ಸಂಭವಿಸಿದಂತೆ ಮತ್ತು ಮುಂಬರುವ ಹೊಸ ವರ್ಷ ಸರ್ವರಿಗೂ ಒಳಿತು ಮಾಡಿ ನಾಡು ಸುಬಿಕ್ಷೆಯಾಗಿರಲಿ ಎಂದು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಯತಿಗಳು ಹೋಮ-ಹವನ ನಡೆಸಿದರು.
ಮೂರು ದಿನಗಳ ಈ ಯಜ್ಞದಲ್ಲಿ ಒಟ್ಟು 24 ಕಳಸಗಳನ್ನು ಸ್ಥಾಪಿಸಿ, ಐದು ಹೋಮ ಕುಂಡಗಳನ್ನು ನಿರ್ಮಿಸಿ ಪ್ರತಿ ಹೋಮ ಕುಂಡದಲ್ಲಿ 11 ಯತಿಗಳು ಪಾಲ್ಗೊಂಡು ಜಪ ಮತ್ತು ಮಂತ್ರ ಪಠಿಸಿದರು. ಪ್ರಧಾನ ಆಚಾರ್ಯ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀಅರ್ಜುನ ಅವಧೂತ ಅವರು ಪೂರ್ಣಾಹುತಿ ನೆರವೇರಿಸಿದರು.