ಜಿಲ್ಲೆ

ಅಕ್ಷರ ದಾಸೋಹ ಕಾರ್ಯ ಮಾದರಿ

ವಿದ್ಯಾ ಶೆಟ್ಟನಗೌಡ್ರ

ಹುಕ್ಕೇರಿ: ಸ್ಥಳೀಯ ಗುರುಶಾಂತೇಶ್ವರ ಅಕ್ಷರ ದಾಸೋಹ ಕೇಂದ್ರದ ಕಾರ್ಯ ಮಾದರಿ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ೬೫ ಸಾವಿರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿರುವುದು ಪ್ರಶಂಸನೀಯ ಎಂದು ಚಿಕ್ಕೋಡಿ ಡಿಡಿಪಿಐ ಸೀತಾರಾಮ ಹೇಳಿದರು.

ಇಲ್ಲಿನ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಅಕ್ಷರ ದಾಸೋಹ ಕೇಂದ್ರದಲ್ಲಿ ಅಕ್ಷರ ದಾಸೋಹ ಯೋಜನೆ ಪ್ರಾರಂಭೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಮಗು ಹಸಿವಿನಿಂದ ಶಿಕ್ಷಣ ಕಲಿಯಬಾರದು ಮತ್ತು ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಪ್ರಾರಂಭಿಸಿದೆ. ಮೊದಲ ಬಾರಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ ನೌಕರರು ಎರಡು ಮಕ್ಕಳನ್ನು ಶೈಕ್ಷಣಿಕ ದತ್ತು ತೆಗೆದುಕೊಂಡು ಓದಿಸುವ ಯೋಜನೆ ಪ್ರಾರಂಭಿಸಲು ಚಿಂತನೆ ನಡೆಸಿದೆ ಎಂದರು.

ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಜತೆಗೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆ ಜಾರಿ ತಂದಿವೆ ಎಂದು ಹೇಳಿದರು.

ತಾಪಂ ಇಒ ಟಿ.ಆರ್.ಮಲ್ಲಾಡದ, ಬಿಇಒ ಪ್ರಭಾವತಿ ಪಾಟೀಲ ಮಾತನಾಡಿದರು. ಗಣ್ಯರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್. ಪದ್ಮನ್ನವರ, ಅಕ್ಷರ ದಾಹೋಹ ಅಽಕಾರಿ ಸವಿತಾ ಹಲಕಿ, ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಸಿದ್ಧಲಿಂಗಯ್ಯ ಹಿರೇಮಠ, ಸಂಪತ್ತಕುಮಾರ ಶಾಸ್ತ್ರಿ ಇತರರು ಇದ್ದರು.