ಜಿಲ್ಲೆ

ಅಕ್ಷರ ಜಾತ್ರೆಗೆ ಸಿಂಗಾರಗೊಂಡ ಅರಕಲಗೂಡು

ಅರಕಲಗೂಡು: ಪಟ್ಟಣದಲ್ಲಿ ಮಾ.13 ಮತ್ತು 14ರಂದು ನಡೆಯಲಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಕನ್ನಡದ ತೇರು ಎಳೆಯಲು ಅನಕೃ ತವರು ಸಿಂಗಾರಗೊಂಡು ಸಂಭ್ರಮದ ವಾತಾವರಣ ನೆಲೆಸಿದೆ.

ಸಮ್ಮೇಳನಕ್ಕಾಗಿ ಪಟ್ಟಣದ ಕ್ರೀಡಾಂಗಣದಲ್ಲಿ ಕಾದಂಬರಿ ಸಾರ್ವಭೌಮ ಡಾ.ಅ.ನ.ಕೃಷ್ಣರಾಯ (ಅನಕೃ) ಹೆಸರಿನಲ್ಲಿ ಭವ್ಯ ವೇದಿಕೆ ಸಿದ್ಧಗೊಂಡಿದ್ದು ಕಾರ್ಯಕ್ರಮ ವೀಕ್ಷಿಸಲು 3 ಸಾವಿರ ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. 21 ಮಾರಾಟ ಮಳಿಗೆಗಳು ಹೆಸರು ನೋಂದಾಯಿಸಿಕೊಂಡಿದ್ದು ಇದರಲ್ಲಿ 8 ಪುಸ್ತಕ ಮಾರಾಟ ಮಳಿಗೆಗಳು ಇರಲಿವೆ. ಉಳಿದಂತೆ ಆಯುರ್ವೇದ ಚಿಕಿತ್ಸೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ಪನ್ನಗಳು ಮುಂತಾದ ಮಾರಾಟ ಮಳಿಗೆಗಳು ಇರಲಿದೆ. ಗಣಪತಿ ಕೊತ್ತಲು ಬಳಿ ಸಾಹಿತಿ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕ್ರೀಡಾಂಗಣಕ್ಕೆ ತೆರಳುವ ರಸ್ತೆಯಲ್ಲಿ ಖ್ಯಾತ ನೀರಾವರಿ ತಜ್ಞ ಎಚ್.ಎನ್. ನಂಜೇಗೌಡ ಹಾಗೂ ಕ್ರೀಡಾಂಗಣದ ಬಳಿ ಸಾಹಿತಿ, ಸಂಸ್ಕೃತ ವಿದ್ವಾಂಸ ಸಿ.ಜಿ.ಪುರುಷೋತ್ತಮ್ ಹೆಸರಿನ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಕನ್ನಡ ಧ್ವಜಗಳು, ಸ್ವಾಗತ ಕೋರುವ ಬ್ಯಾನರ್‌ಗಳಲ್ಲದೆ ತಳಿರು ತೋರಣ, ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು. ಅಕ್ಷರ ಜಾತ್ರೆಗೆ ಪಟ್ಟಣ ಕಳೆಗಟ್ಟಿದೆ.

ತಾಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣ ಮೂಲದ ಖ್ಯಾತ ಸಂಗೀತ ವಿದ್ವಾಂಸ ಹಾಗೂ ಲೇಖಕ ಡಾ.ಆರ್.ಕೆ.ಪದ್ಮನಾಭ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಬೆಳಗ್ಗೆ 9ಕ್ಕೆ ಗಣಪತಿ ಕೊತ್ತಲು ಆವರಣದಿಂದ ಬೈಪಾಸ್ ರಸ್ತೆ, ಅನಕೃ ವೃತ್ತದ ಮೂಲಕ ಸಮ್ಮೇಳನದ ವೇದಿಕೆವರೆಗೆ ಅಧ್ಯಕ್ಷರ ಮೆರವಣಿಗೆ ನಡೆಯಲಿದ್ದು, 11 ಬಗೆಯ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ. ಸಮ್ಮೇಳನದಲ್ಲಿ ಜನರಿಗೆ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿದೆ.

13ರಂದು ಬೆಳಗ್ಗೆ 8ಕ್ಕೆ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ರಾಷ್ಟ್ರ ಧ್ವಜಾರೋಹಣ ಮಾಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ ಪರಿಷತ್ತಿನ ಧ್ವಜ ಹಾಗೂ ಶಾಸಕ ಎ.ಟಿ.ರಾಮಸ್ವಾಮಿ ನಾಡ ಧ್ವಜಾರೋಹಣ ಮಾಡುವರು. ಬೆಳಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಶಾಸಕ ಎ.ಟಿ.ರಾಮಸ್ವಾಮಿ ಚಾಲನೆ ನೀಡುವರು. ಭುವನೇಶ್ವರಿ ಭಾವಚಿತ್ರಕ್ಕೆ ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಪುಷ್ಪಾರ್ಚನೆ ಮಾಡುವರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಉಪಸ್ಥಿತರಿದ್ದು, ಶಾಸಕ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆ ವಹಿಸುವರು. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಉಪಸ್ಥಿತರಿರುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ ಆಶಯ ನುಡಿಗಳನ್ನಾಡುವರು. ಅನಕೃ ವೇದಿಕೆಯನ್ನು ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್‌ಉದ್ಘಾಟಿಸುವರು.

ಸಮ್ಮೇಳನವನ್ನು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಚಿತ್ರಕಲಾ ಪ್ರದರ್ಶವನ್ನು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಪುಸ್ತಕ ಮಳಿಗೆಯನ್ನು ಮಾಜಿ ಸಚಿವ ಎ.ಮಂಜು ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಜನಪದ ವಿದ್ವಾಂಸ ಹಂಪನ ಹಳ್ಳಿ ತಿಮ್ಮೇಗೌಡ ಉಪಸ್ಥಿತಿರಿರುವರು. ಬೆಳಗ್ಗೆ 10.45ಕ್ಕೆ ಸಮ್ಮೇಳನಾಧ್ಯಕ್ಷ ಡಾ ಆರ್.ಕೆ.ಪದ್ಮನಾಬ ಅವರ ನುಡಿ, ಮಧ್ಯಾಹ್ನ 2ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಮಧ್ಯಾಹ್ನ 2.3ಕ್ಕೆ ‘ಪ್ರಸ್ತುತ ವಿದ್ಯಾಮಾನಗಳು ಮತ್ತು ಜವಾಬ್ದಾರಿ’ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಪತ್ರಕರ್ತ ಟಿ.ಸತೀಶ್ ಅಧ್ಯಕ್ಷತೆ ವಹಿಸುವರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬರಾವ್ ಆಶಯ ನುಡಿಯನ್ನಾಡುವರು. ಪತ್ರಕರ್ತ ಬಿ.ಆರ್ ಉದಯಕುಮಾರ್ ಉಪಸ್ಥಿತಿ ಇರುವರು. ‘ಪತ್ರಿಕೆಗಳು ಮತ್ತು ಉದ್ಯಮಶೀಲತೆ’ ಕುರಿತು ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಶಿವಕುಮಾರ ಕಣಸೋಗಿ ವಿಚಾರ ಮಂಡಿಸುವರು. ‘ಡಿಜಿಟಲ್ ಕಾಲಮಾನದಲ್ಲಿ ಭಾಷೆ ಮತ್ತು ಬರವಣಿಗೆ’ ಕುರಿತು ಮೈಸೂರಿನ ಲೇಖಕಿ ಡಾ. ಶ್ವೇತಾ ಮಡಪ್ಪಾಡಿ, ‘ಸಾಮಾಜಿಕ ಜಾಲತಾಣಗಳು ಮತ್ತು ಅರಿವಿನ ಎಚ್ಚರ’ ಕುರಿತು ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಅವರು ವಿಚಾರ ಮಂಡಿಸಲಿದ್ದಾರೆ.

ಸಂಜೆ 4.15ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಸುಬ್ಬುಹೊಲೆಯಾರ್ ಅಧ್ಯಕ್ಷತೆ ವಹಿಸುವರು. ಕವಯತ್ರಿ ಡಾ. ಭವ್ಯನವೀನ್ ಆಶಯ ನುಡಿಯನ್ನಾಡುವರು. ಸಂಜೆ 6ಕ್ಕೆ ಸಮ್ಮೇಳನಾಧ್ಯಕ್ಷ ಆರ್.ಕೆ. ಪದ್ಮನಾಭ ಅವರೊಂದಿಗೆ ಸಂವಾದ ನಡೆಯಲಿದ್ದು, ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.