ಶೃಂಗೇರಿ ಭಾರತೀನಗರ ಮತ್ತು ಬನಶಂಕರಿ ಬಡಾವಣೆ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಅಕ್ರುವಳ್ಳಿ ನಿವಾಸಿಗರು ಉದ್ಘಾಟಿಸಿದರು.ದಿನೇಶ್ ಶೆಟ್ಟಿ, ಕೇಶವ್, ಮಧುರಾ, ನಾಗರಾಜ ಶೆಟ್ಟಿ ಇತರರಿದ್ದರು. 
ಜಿಲ್ಲೆ

ಅಕ್ರುವಳ್ಳಿಯಲ್ಲಿ ಸ್ಥಳೀಯರಿಂದಲೇ ರಸ್ತೆ ನಿರ್ಮಾಣ

ಶೃಂಗೇರಿ: ಭಾರತೀನಗರ ಮತ್ತು ಬನಶಂಕರಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ಅಕ್ರುವಳ್ಳಿ ಮುಖ್ಯ ರಸ್ತೆಯನ್ನು ಬಡಾವಣೆಯ ನಿವಾಸಿಗಳೇ ಹಣ ಸಂಗ್ರಹಿಸಿ ಗುಣಮಟ್ಟದ ಡಾಂಬರು ರಸ್ತೆ ನಿರ್ಮಿಸಿ ಸೋಮವಾರ ಉದ್ಘಾಟಿಸಿದರು.

ಹದಗೆಟ್ಟ ರಸ್ತೆ, ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಬಡಾವಣೆ, 2012ರಲ್ಲಿ ಭತ್ತದ ಗದ್ದೆಯಾಗಿದ್ದ ಈ ಪ್ರದೇಶ ನಿವೇಶನವಾಗಿ ಮಾರ್ಪಾಡು ಮಾಡಲಾಗಿತ್ತು. ಮುಖ್ಯ ರಸ್ತೆ ಸಹಿತ ಮನೆಗಳಿಗೆ ಸಂಪರ್ಕಿಸುವ ರಸ್ತೆ ಕೆಸರು, ಗುಂಡಿಯಿಂದ ಕೂಡಿದ್ದು, ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಮಳೆಗಾಲದಲ್ಲಿ ಕೆಸರು ಹಾಗೂ ಬೇಸಿಗೆಯಲ್ಲಿ ದೂಳಿನಿಂದ ವಾಹನ ಸವಾರರು ಪರದಾಡುವಂತಾಗಿತ್ತು.

ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಬಡಾವಣೆಯಲ್ಲಿ 350ಕ್ಕೂ ಹೆಚ್ಚು ನಿವೇಶನವಿದ್ದು, ಈಗಾಗಲೇ 200 ಕ್ಕೂ ಹೆಚ್ಚು ಮನೆ ನಿರ್ಮಾಣವಾಗಿದೆ. ಮೂಲ ಸೌಕರ್ಯ ವಂಚಿತವಾಗಿರುವ ಬಡಾವಣೆಗೆ ಗ್ರಾಪಂನಿಂದ ಬೀದಿ ದೀಪ ಮಾತ್ರ ಕಲ್ಪಿಸಲಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ ಇನ್ನೂ ಲಭ್ಯವಾಗಿಲ್ಲ. ಗ್ರಾಪಂ ಈ ವರ್ಷ ಚರಂಡಿ ನಿರ್ಮಾಣಕ್ಕಾಗಿ 2 ಲಕ್ಷ ರೂ. ಅನುದಾನದ ಕೆಲಸ ಹೊರತುಪಡಿಸಿದರೆ ರಸ್ತೆಗಾಗಿ ಅನುದಾನ ನೀಡಿಲ್ಲ ಎಂದು ಬಡಾವಣೆ ನಿವಾಸಿಗಳ ಆರೋಪವಾಗಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಆಗಾಗ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದರು. ಅಧಿಕಾರಿಗಳು ಮಾತುಕತೆ ಮೂಲಕ ನಿವಾಸಿಗಳ ಮನವೊಲಿಸಿ, ಬಹಿಷ್ಕಾರ ಹಿಂಪಡೆಯಲಾಗಿತ್ತು. ಇಷ್ಟಾದರೂ ರಸ್ತೆ ನಿರ್ಮಿಸದಿದ್ದರಿಂದ ಮುಖ್ಯ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸಲು ಪಣ ತೊಟ್ಟ ನಿವಾಸಿಗಳು 15.75 ಲಕ್ಷ ರೂ. ದೇಣಿಗೆ ಸಂಗ್ರಹ ಮಾಡಿ, 286 ಮೀಟರ್ ರಸ್ತೆ ನಿರ್ಮಿಸಿದ್ದು, ಇನ್ನೂ 330 ಮೀಟರ್ ರಸ್ತೆ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ನಿವಾಸಿಗಳು ಸಂಘಟನೆ ಮಾಡಿಕೊಂಡಿದ್ದಾರೆ. ಪ್ರತ್ಯೇಕ ಬ್ಯಾಂಕ್ ಖಾತೆ ಮಾಡಿಕೊಂಡು ಪಾರದರ್ಶಕವಾಗಿ ಖರ್ಚು ಮಾಡಿದ್ದಾರೆ.

ನೂತನ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಸ್.ಮಹೇಶ್, ದಿನೇಶ್ ಶೆಟ್ಟಿ, ಕೇಶವ್, ಮಧುರಾ, ಸವಿತಾ, ಆಶ್ರಿತಾ, ಚಂದ್ರಶೇಖರ್, ಜ್ಞಾನೇಶ, ಸುಬ್ರಹ್ಮಣ್ಯ, ರಮೇಶ್, ವೆಂಕಟೇಶ್, ಗುರುಪ್ರಸಾದ್, ವಿದ್ಯಾರಣ್ಯಪುರ ಗ್ರಾಪಂ ಸದಸ್ಯ ನಾಗರಾಜ ಶೆಟ್ಟಿ ಇದ್ದರು.